ಮಾನವನ ರಕ್ತ ಬಳಸಿದ ಸಟನ್ ಶೂಸ್ ವಿರುದ್ಧ ನೈಕ್‌ನಿಂದ ಕಾನೂನು ಸಮರ!

ನ್ಯೂಯಾರ್ಕ್, ಮಾ.೩೦- ಎಮ್‌ಎಸ್‌ಸಿಹೆಚ್‌ಎಫ್ ನೂತನವಾಗಿ ಹೊರತಂದಿರುವ ವಿವಾದಾತ್ಮಕ ಸಟನ್ ಶೂಸ್ ವಿರುದ್ಧ ಪ್ರಖ್ಯಾತ ಶೂ ತಯಾರಿಕಾ ಕಂಪೆನಿ ನೈಕ್ ಕಾನೂನು ಸಮರಕ್ಕೆ ಮುಂದಾಗಿದೆ. ವಿವಾದಾತ್ಮಕ ಸಟನ್ ಶೂಸ್‌ನಲ್ಲಿ ಮಾನವನ ನೈಜ ರಕ್ತವನ್ನು ಬಳಸಿಕೊಂಡಿದ್ದು, ಅಲ್ಲದೆ ನೈಕ್‌ನ ಖ್ಯಾತ ಲೋಗೋವನ್ನು ಕೂಡ ಬಳಸಿರುವುದೇ ವಿವಾದಕ್ಕೆ ಕಾರಣವಾಗಿದೆ.
ಖ್ಯಾತ ರ್ಯಾಪರ್ ಲಿಸ್ ನ್ಯಾಸ್ ಜೊತೆ ಒಡಂಬಡಿಕೆ ಮಾಡಿಕೊಂಡು ಎಮ್‌ಎಸ್‌ಸಿಹೆಚ್‌ಎಫ್ ೬೬೬ ಜೊತೆಗಳ ಸಟನ್ ಶೂಸ್‌ಗಳನ್ನು ಸೋಮವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆದರೆ ಅಚ್ಚರಿಯ ರೀತಿಯಲ್ಲಿ ಎಂಬಂತೆ ಬಿಡುಗಡೆಯಾದ ನಿಮಿಷಗಳೊಳಗೆ ಎಲ್ಲಾ ಶೂಸ್‌ಗಳು ಸೋಲ್ಡ್‌ಔಟ್ ಆಗಿತ್ತು. ಈ ಶೂಸ್‌ಗಳ ಸೋಲ್‌ನಲ್ಲಿ ಒಂದು ಬಿಂದು ಮಾನವನ ನೈಜ ರಕ್ತವನ್ನು ಹಾಕಲಾಗಿರುವುದೇ ಇದೀಗ ವಿವಾದ ಮೂಡಲು ಕಾರಣವಾಗಿದೆ. ಅಲ್ಲದೆ ನೈಕ್‌ನ ಖ್ಯಾತ ಲೋಗೋವನ್ನು (ಸ್ಪೋಶ್ ವಿನ್ಯಾಸ) ಕೂಡ ಈ ಶೂಸ್‌ನಲ್ಲಿ ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪೆನಿ ವಿರುದ್ಧ ನೈಕ್ ಕಾನೂನು ಸಮರಕ್ಕೆ ಮುಂದಾಗಿದೆ. ಈ ಸಟನ್ ಶೂಸ್‌ಗಳು ಎಮ್‌ಎಸ್‌ಸಿಹೆಚ್‌ಎಫ್ ಹಾಗೂ ನೈಕ್ ನಡುವೆ ಸಹಯೋಗ ಇರುವಂತೆ ಜನರಲ್ಲಿ ಗೊಂದಲ ಹಾಗೂ ತಪ್ಪು ಭಾವನೆ ಬಿಂಬಿಸುತ್ತಿದೆ ಎಂದು ನೈಕ್ ತನ್ನ ದೂರಿನಲ್ಲಿ ತಿಳಿಸಿದೆ.