ಮಾನವನ ಎಲ್ಲ ಅಂಗಗಳಲ್ಲಿ ಕಣ್ಣುಗಳಿಗೆ ಅತ್ಯಂತ ಮಹತ್ವದ ಸ್ಥಾನ : ನಾಗರತ್ನ ಹೆಗಡೆ

ಕಾಗವಾಡ :ಮಾ.17: ಮಾನವನ ಎಲ್ಲ ಅಂಗಗಳಲ್ಲಿ ಕಣ್ಣು ಅತ್ಯಂತ ಮಹತ್ವದ ಸ್ಥಾನ ಹೊಂದಿದ್ದು, ಅದನ್ನು ಸುರಕ್ಷಿತವಾಗಿಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಅಥಣಿ ಜಿಲ್ಲಾ ನಿರ್ದೇಶಕ ನಾಗರತ್ನ ಹೆಗಡೆ ಹೇಳಿದರು.
ಅವರು ಗುರುವಾರ ದಿ. 16 ರಂದು ಶೇಡಬಾಳ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಗವಾಡ ತಾಲೂಕಾ ಘಟಕ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆಯುವ ಸೃಜನಶೀಲ ಕಾರ್ಯಕ್ರಮದ ಅಂಗವಾಗಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಸುಂದರವಾದ ಜಗತ್ತನ್ನು ಹಾಗೂ ನಿಸರ್ಗ ಸೌಂದರ್ಯವನ್ನು ನಾವು ನೋಡಬೇಕಾದರೆ ನಮ್ಮ ನೇತ್ರಗಳು ಅತ್ಯಂತ ಸುರಕ್ಷಿತವಾಗಿರಬೇಕಾಗುತ್ತದೆ. ಆ ಕಾರಣದಿಂದಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಇಸ್ಲಾಪೂರದ ದೃಷ್ಟಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ. ಜಾವೇದ ಮಗದುಮ ಹಾಗೂ ಸಿಬ್ಬಂದಿ ವರ್ಗದವರು ಕಣ್ಣು ತಪಾಸಣೆ ಕೈಗೊಂಡರು. ಸುಮಾರು 100 ಜನರ ನೇತ್ರ ತಪಾಸಣೆ ಮಾಡಲಾಯಿತು. 30 ಜನರಿಗೆ ಕನ್ನಡಕವನ್ನು ವಿತರಿಸಲಾಯಿತು.
ಈ ಸಮಯದಲ್ಲಿ ಅಥಣಿ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ, ನೇತ್ರ ತಜ್ಞ ಡಾ. ಜಾವೇದ ಮಗದುಮ, ಕಾಗವಾಡ ತಾಲೂಕಿನ ಯೋಜನಾಧಿಕಾರಿ ಸಂಜೀವ ಮರಾಠೆ, ಶೇಡಬಾಳದ ಹಿರಿಯರಾದ ಅರ್ಜುನ ಗೋರ್ಪಡೆ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈನಾಜ, ಕಾಗವಾಡ ವಲಯದ ಮೇಲ್ವಿಚಾರಕಿ ದೀಪಾ ಸೇರಿದಂತೆ ಕಾಗವಾಡ ವಲಯದ ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.