ಮಾನವನ ಅಭ್ಯುದಯವೇ ವಿಜ್ಞಾನದ ಮೂಲ ಆಶಯ:ಪ್ರೊ. ಲಿಂಗಪ್ಪ

ಕಲಬುರಗಿ:ಆ.28: ಮಾನವ ಕುಲದ ಅಭ್ಯುದಯವೇ ವೈಜ್ಞಾನಿಕ ಸಂಶೋಧನೆಯ ಮೂಲ ಆಶಯವಾಗಿದೆ. ವಿಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಶೋಧನೆ ಮತ್ತು ಹೊಸ ಅವಿಷ್ಕಾರಗಳನ್ನು ಜಗತ್ತಿನ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿ ಬಳಸಬೇಕಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ ಪ್ರೊ. ಕೆ. ಲಿಂಗಪ್ಪ ಹೇಳಿದರು.

ಕುಸನೂರು ರಸ್ತೆಯಲ್ಲಿರುವ ಜನರಂಗ ವೇದಿಕೆ ವತಿಯಿಂದ ದಿ. ಗೌರಮ್ಮ ರುದ್ರಯ್ಯ ಘಂಟಿ ಅವರ 23ನೇ ಪುಣ್ಯಸ್ಮರಣೆ ಹಾಗೂ ಅದರ ಅಂಗವಾಗಿ ಪ್ರಕಾಶ ಗರುಡ ಅನುವಾದಿಸಿರುವ ಉಮೇಶ ಪಾಟೀಲ ನಿರ್ದೇಶನದ “ನಾನು ಆಲ್ಬರ್ಟ್ ಐನ್‍ಸ್ಟೈನ್” ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಬೌತಶಾಸ್ತ್ರದಲ್ಲಿ ಸಂಶೊಧನೆ ಮಾಡಿ ನೋಬಲ್ ಪ್ರಶಸ್ತಿ ಪಡೆದಿರುವ ಆಲ್ಬರ್ಟ್ ಐನ್‍ಸ್ಟೈನ್ ಅವರು 20ನೇ ಶತಮಾನದ ಮಹಾನ್ ವಿಜ್ಞಾನಿ. ಬೌತ ಜಗತ್ತಿಗೆ ಅವರು ನೀಡಿದ ಸಾಪೇಕ್ಷ ಸಿದ್ಧಾಂತವು ಮಾನವನ ಸಂವೇದನಾಶೀಲತೆಯನ್ನು ಒತ್ತಿ ಹೇಳುತ್ತದೆ. ಒಬ್ಬ ಕ್ರಾಂತಿಕಾರಕ ಸಂಶೋಧಕನಾಗಿ ಗುರುತಿಸಿಕೊಂಡ ಐನ್‍ಸ್ಟೈನ್ ಅವರು ನ್ಯೂಟನ್ನನ ಚಲನಶೀಲ ಸಿದ್ಧಾಂತದ ಮಾದರಿಯನ್ನು ಅನುಸರಿಸಿ ಸಾಪೇಕ್ಷದ ಕ್ಲಿಷ್ಟ ಸಿದ್ಧಾಂತವನ್ನು ಸರಳೀಕರಣಗೊಳಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.

ನಿವೃತ್ತ ವಾಣಿಜ್ಯ ತೆರಿಗೆ ಉಪ ಆಯುಕ್ತ ಎಸ್.ಎಚ್. ಬಸವಪ್ರಭು ಅತಿಥಿಯಾಗಿ ಮಾತನಾಡಿ ಶ್ರಂಕಯ್ಯ ಘಂಟಿಯವರ ತಾಯಿ ದಿ. ಗೌರಮ್ಮ ರುದ್ರಯ್ಯ ಘಂಟಿಯವರು ಒಬ್ಬ ಆದರ್ಶ ತಾಯಿಯಾಗಿದ್ದರು. ಅವರ ಬದುಕು ಮತ್ತು ಪ್ರೋತ್ಸಾಹದ ಮಾತುಗಳು ಶಂಕ್ರಯ್ಯ ಘಂಟಿಯವರನ್ನು ಒಬ್ಬ ಪ್ರತಿಭಾನ್ವಿತ ಕಲಾವಿದನನ್ನಾಗಿ ರೂಪಿಸಿದೆ. ಅವರ ನಟನ ಕೌಶಲ್ಯಗಳು ಯುವ ಕಲಾವಿದರಿಗೆ ಪ್ರೇರಣೆ ಎಂದರು.

ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಶಿವಗಂಗಾ ರುಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಜ್ಞಾನವು ಹೊಸದನ್ನು ಹೇಳುವುದರೊಂದಿಗೆ ಅದನ್ನು ಹೇಗೆ ಸಮಾಜದ ಒಳಿತಿಗೆ ಬಳಸಬೇಕೆ ಎಂಬುದನ್ನು ಸಾದರಪಡಿಸುತ್ತದೆ. ಮೇದಾವಿ ಐನ್‍ಸ್ಟೈನ್ ರೂಪಿಸಿದ ಸಿದ್ಧಾಂತ ಸಮಾಜವನ್ನು ಅಸ್ಥಿರಗೊಳಿಸುವ ಶಕ್ತಿಗಳನ್ನು ವಿರೋಧಿಸಿ ಮಾನವ ಕಲ್ಯಾಣಕ್ಕಾಗಿ ದುಡಿದವರು. ಅವರ ವೈಯಕ್ತಿಕ ಬದುಕಿನ ವಿಚಾರಗಳನ್ನು ಮೀರಿ ಬೆಳೆದು ಆದುನಿಕ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಧಾರವಾಡದ ಕೆಎಲ್‍ಇ ಕಂಪ್ಯೂಟರ್ ವಿಭಾಗದ ಪ್ರಾಧ್ಯಾಪಕ ಡಾ. ಶಶಿಧರ್ ಕುಬ್ಸದ್, ಕೆಎಲ್‍ಇ ಇನ್ಸ್ಟಿಟ್ಯೂಟ್‍ನ ಆರ್ಕಿಟಕ್ಚರ್ ವಿಭಾಗದ ಪ್ರಾಧ್ಯಾಪಕಿ ಪ್ರಿಯಾಂಕ ಎಸ್. ಇ, ಪ್ರೊ. ಆರ್. ಡಿ. ಮಠದ್, ಹಿರಿಯ ಕಲಾವಿದ ಬಾಬುರಾವ್ ಹೆಚ್, ಪ್ರೊ. ಕಿರಣ್ ಗಾಜನೂರು, ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಶ್ರೀನಿವಾಸ್, ಉಪನ್ಯಾಸಕ ಅವಿನಾಶ್ ಬಡಿಗೇರ್, ನಿವೃತ್ತ ಇಂಜಿನಿಯರ್ ಮುದಗಲ್ ವೆಂಕಟೇಶ, ಸಂಶೋಧನಾ ವಿದ್ಯಾರ್ಥಿನಿ ನಯನಾ, ಶಿವಲಿಂಗಯ್ಯ ಘಂಟಿಮಠ ಅವರ ಕುಟುಂಭವರ್ಗದವರು ಇದ್ದರು. ಶ್ರೀಮತಿ ಆಶಾ ಕಂಠಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು.