ಮಾನಪ್ಪ ವಜ್ಜಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ : ಆರ್.ಮಾನಸಯ್ಯ

ಭ್ರಷ್ಟಾಚಾರದಿಂದ ಬುಡಮೇಲಾದ ನಂದವಾಡಗಿ ಯೋಜನೆ
ಲಿಂಗಸುಗೂರು.ಮೇ.೨೧- ನಂದವಾಡಗಿ ಯೋಜನೆ ಬಿಜೆಪಿಗರ ಭ್ರಷ್ಟಾಚಾರದಿಂದ ಬುಡಮೇಲಾಗಿದೆ. ಕೂಡಲೇ ಕಾಮಗಾರಿ ನಿಲ್ಲಿಸಿ ಸಮಗ್ರ ತನಿಖೆ ನಡೆಸಿ ಮಾನಪ್ಪ ವಜ್ಜಲ್ ಸೇರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಿಪಿಐ(ಎಂಎಲ್) ರೆಡ್‌ಸ್ಟಾರ್ ರಾಜ್ಯ ಸಮಿತಿ ಸದಸ್ಯ ಆರ್.ಮಾನಸಯ್ಯ ಒತ್ತಾಯಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿದ್ದ ಮತ್ತು ರೈತರ ಹೋರಾಟದ ಫಲವಾಗಿ ಅನುಷ್ಠಾನಕ್ಕೆ ಬಂದ ಅತ್ಯಂತ ಮಹತ್ವದ ಯೋಜನೆ ನಂದವಾಡಗಿ ನೀರಾವರಿ ಯೋಜನೆಯ ಬಿಜೆಪಿ ಸರ್ಕಾರದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜಂಟಿ ಮಸಲತ್ತುನಿಂದ ಬುಡಮೇಲಾಗಿ ನಿಂತಿದೆ. ಮೊದಲನೇಯದಾಗಿ ಈ ಯೋಜನೆಯ ಬಹುಪಾಲು ಹಣವನ್ನು ಕೊಳೆಹೊಡೆಯುವುದು, ಎರಡನೇಯದಾಗಿ ರೈತರ ಹೊಲಗಳಿಗೆ ಹೋಗಬೇಕಾದ ನೀರನ್ನು ಬಿಜೆಪಿ ಹಾಗೂ ಇತರೆ ಬಲಿಷ್ಠ ರಾಜಕಾರಣಿಗಳ ಜಮೀನುಗಳಿಗೆ ಮೀಸಲಿರುವಂತೆ ನಿರ್ಮಾಣ ಕಾಮಗಾರಿಯನ್ನೇ ಪರಿವರ್ತನೆ ಮಡಲಾಗಿದೆ. ಇದಲ್ಲೆಕ್ಕಿಂತ ಹೆಚ್ಚಾಗಿ ಈ ಯೋಜನೆಯಿಂದ ಲಿಂಗಸುಗೂರು, ಹುನುಗುಂದ, ಮಸ್ಕಿ, ಸಿರವಾರ ತಾಲೂಕಿನ ನೀರಾವರಿ ವಂಚಿತ ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂಬ ಸರ್ಕಾರದ ಭರವಸೆ ಅತ್ಯಂತ ಮೋಸದಾಯಕವಾಗಿದೆ ಎಂದು ಆರೋಪಿಸಿದರು.
ಆರಂಭದಲ್ಲಿ ೧೫೦೦ ಕೋಟಿ ಇದ್ದ ಯೋಜನಾ ವೆಚ್ಚವನ್ನು ೩೦೦ ಕೋಟಿ ಹೆಚ್ಚಿಸಿದ್ದು ಮೊದಲನೇಯ ಆಕ್ರಮ. ತದನಂತರ ಕಾಮಗಾರಿಗೆ ಟೆಂಡರ್ ಕರೆದು ಹಾಕಲಾದ ಷರತ್ತುಗಳ ಪೈಕಿ ಮಾನಪ್ಪ ವಜ್ಜಲ್ ಮಾಲಿಕತ್ವದ ಎನ್‌ಡಬ್ಲೂಡಿ ಕಂಪನಿಗೆ ಕಾನೂನು ಬಾಹಿರವಾಗಿ ಭಾರಿ ರಿಯಾಯಿತಿ ನೀಡಿ ಗುತ್ತಿಗೆ ಕೊಡಿಸುವಲ್ಲಿ ಸಿಎಂ ಯಡಿಯೂರಪ್ಪನ ಮಗ ವಿಜಯೇಂದ್ರ ಅವರ ಕೃಪಾಕಟಾಕ್ಷ ಇದೆ. ಎನ್‌ಡಬ್ಲೂಡಿ ಕನ್ಸಸ್ಟ್ರಕ್ಷನ್ ಕಂಪನಿಯಾಗಿದ್ದು ಆದರೆ ಹನಿನೀರಾವರಿ ಕಾಮಗಾರಿ ಗುತ್ತಿಗೆಗೆ ಮಾಡಿದ ಅನುಭವ ಈ ಕಂಪನಿಗೆ ಅರ್ಹತೆ ಇಲ್ಲಾ, ಆದರೆ ಈ ಕಂಪನಿಗೆ ಸರಾಸರಿ ೬೦೦ ಕೋಟಿ ರೂ.ಗುತ್ತಿಗೆ ಅವಾಡ್ ಆಗಿದೆ. ಮೊದಲು ಸುತ್ತಿನ ಟೆಂಡರ್‌ನಲ್ಲಿ ತಿರಸ್ಕೃತಗೊಂಡಿದೆ. ಆದರೂ ಕೆಬಿಜೆಎನ್‌ಎಲ್ ಕಾರ್ಯಪಾಲಕ ಅಭಿಯಂತರ ಸುರೇಂದ್ರಬಾಬು ಹಾಗೂ ಮುಖ್ಯ ಅಭಿಯಂತರ ಎಸ್.ರಂಗರಾಮ್ ಅವರು ವಿಜಯೇಂದ್ರ ನಿರ್ದೇಶನದಂತೆ ಈ ಕಂಪನಿಗೆ ಗುತ್ತಿಗೆ ನೀಡಲು ಮರು ಪ್ರಸ್ತಾವನೆ ಸಲ್ಲಿಸಿ ಗುತ್ತಿಗೆ ಪಡೆದಿದ್ದಾರೆ. ಟೆಂಡರ್ ಮೊತ್ತಕ್ಕಿಂತ ಶೇ.೧೫ ಹೆಚ್ಚಿನ ಮೊತ್ತದಲ್ಲಿ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಮುಂಗಡ ಹಣ ಶೇ೧೦ ಬದಲು ಶೇ.೪೦ ಅದರಂತೆ ೨೩೦ ಕೋಟಿ ಸರ್ಕಾರ ಮುಂಗಡವಾಗಿ ಬಿಡುಗಡೆ ಮಾಡಿದೆ. ಅತ್ಯಂತ ಆಶ್ಚರ್ಯದ ಸಂಗತಿಎನೆಂದರೆ ಜಲಾಶಯದಿಂದ ನಂದವಾಡಗಿವರಿಗೆ ೧೪ ಕಿ.ಮೀ ವರಿಗೆ ರೈಸಿಂಗ್ ಲೈನ್ ಹಾಗೂ ಮೋಟಾರ್ ಪಂಪಿಂಗ್ ಮುಂತಾದ ಬಹುಮುಖ್ಯ ಕಾಮಗಾರಿ ಗುತ್ತಿಗೆ ಪಡೆದ ಎಲ್‌ಆಂಡ್ ಟಿ ಕಂಪನಿಗೆ ಶೇ.೨೦ ಲೆಸ್‌ನಲ್ಲಿ ಕಾಮಗಾರಿ ಸಿಕ್ಕಿದೆ. ಇದರ ಗುತ್ತಿಗೆ ೨೦೭ ಕೋಟಿಯಾಗಿದೆ. ಇದೇ ರೀತಿ ಆಂದ್ರದ ಮೇಘಾ ಕಂಪನಿಗೆ ಬಿಡ್‌ಗಿಂತ ಕಡಿಮೆ ಮೊತ್ತದಲ್ಲಿ ಗುತ್ತಿಗೆ ನೀಡಿ ಕೇವಲ ೧೦ ಶೇ, ಕೆಲಸದ ಮುಂಗಡ ಹಣ ನೀಡಿದೆ ಎಂದು ಆರೋಪಿಸಿದರು.
ಹನಿನೀರಾವರಿ ಗುತ್ತಿಗೆ ಪಡೆದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಶಾಸಕನಾಗುವ ಮುಂಚೆ ಲಿಂಗಸುಗೂರು ತಾಲೂಕಿನಲ್ಲಿ ಒಂದು ಎಕರೆ ಭೂಮಿ ಖರೀದಿಸಿಲ್ಲಾ, ಎರಡು ಭಾರಿ ಶಾಸಕನಾದ ಮೇಲೆ ೫೦೦ ಎಕರೆಗೂ ಹೆಚ್ಚು ಭೂಮಿ ಖರೀದಿಸಿದ್ದಾರೆ. ಗುಡದನಾಳ ಗ್ರಾಮದ ಪೂರ್ವಕ್ಕೆ ಇರುವ ಗೆಜ್ಜಲಗಟ್ಟಾದ ದಿ.ಬಸವರಾಜೇಶ್ವರಿಯವರ ೨೦೦ಕ್ಕೂ ಅಧಿಕ ಎಕರೆ ಭೂಮಿ ಖರೀದಿಸಿದ್ದಾರೆ. ಈ ಭೂಮಿಗೆ ನೀರುಣಿಸುವ ಉದ್ದೇಶದಿಂದ ನಂದವಾಡಗಿ ಯೋಜನೆಯನ್ನು ಈ ಮಾರ್ಗವಾಗಿ ಹನಿ ನೀರಾವರಿ ಯೋಜನೆ ಕಾಮಗಾರಿ ಆರಂಭಿಸಿದ್ದು, ಇದು ರೈತರಿಗೆ ಮಾಡಿದ ಮಹಾಮೋಸವಾಗಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕು. ಸೂಕ್ತವಾದ ತನಿಖೆ ನಡೆಸಿ ಮಾನಪ್ಪ ವಜ್ಜಲ್ ಸಮೇತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಯಾವುದೇ ಕಾರಣಕ್ಕೂ ಬಿಲ್ ಪಾವತಿಸಬಾರದು ಎಂದು ಆಗ್ರಹಿಸಿದ್ದಾರೆ.
ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಜಿ.ಅಮರೇಶ, ತಾಲೂಕು ಕಾರ್ಯದರ್ಶಿ ಶಾಂತಕುಮಾರ, ಮುಖಂಡರಾದ ತಿಪ್ಪುರಾಜು, ತಿಪ್ಪಣ್ಣ ಹಾಗೂ ಇನ್ನಿತರಿದ್ದರು.