ಮಾನಪ್ಪ ವಜ್ಜಲ್‌ರಿಗೆ ಮುದುಕಪ್ಪ ವಕೀಲರಿಂದ ಸನ್ಮಾನ


ಲಿಂಗಸುಗೂರು.ಡಿ.೨೪- ಹಾಲುಮತ ಸಮಾಜದ ಹಿರಿಯ ಮುಖಂಡ ನ್ಯಾಯವಾದಿ ಮುದುಕಪ್ಪ ಅವರು ಗುರುವಾರ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರ ಕಚೇರಿಗೆ ತೆರಳಿ ಸನ್ಮಾನಿಸಿ ಶುಭಕೋರಿದರು.
ಕಳೆದ ಹತ್ತು ವರ್ಷಗಳ ಕಾಲ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಅವರು ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. ವಜ್ಜಲ್ ಅವರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿರುವ ವಜ್ಜಲ್ ಅವರು, ಜಾತಿ ರಾಜಕಾರಣ ಮಾಡದೆ ಎಲ್ಲಾ ವರ್ಗದವರಿಗೆ ಸರಿಸಮಾನವಾಗಿ ನಡೆದುಕೊಳ್ಳುವ ಜಾತ್ಯಾತೀತ ಮನೋಭಾವನೆ ಉಳ್ಳವರಾಗಿದ್ದಾರೆ. ಚಿನ್ನದ ಗಣಿ ಅಧ್ಯಕ್ಷರಾಗುವ ಮೂಲಕ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗೆ ಮಾನಪ್ಪನವರು ಮುಂದಾಗಬೇಕು. ಅವರ ಸೇವೆ ಕ್ಷೇತ್ರದ ಜನರಿಗೆ ಸಿಗಬೇಕು ಎಂದು ಶುಭ ಕೋರಿದರು.
ಬಿಜೆಪಿ ಸೇರ್ಪಡೆಗೆ ಮುನ್ಸೂಚನೆಯೇ..?: ದಶಕಗಳಿಂದ ಮಾನಪ್ಪ ವಜ್ಜಲ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮುದುಕಪ್ಪ ವಕೀಲರು ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿದ್ದು, ಬಿಜೆಪಿಗೆ ಬರುವ ಮುನ್ಸೂಚನೆ ನೀಡುತ್ತಿದ್ದಾರೆಯೇ? ಎನ್ನುವಂತಹ ವಾತಾವರಣ ಈ ಭೇಟಿಯಿಂದ ಸೃಷ್ಟಿಯಾಗಿದೆ.