ವಿಜಯಪುರ: ಮಾ.31:ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಗುರುವಾರ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಮಗ್ರ ಮಾಹಿತಿ ಪಡೆದು, ಯಾವುದೇ ರೀತಿಯ ದೂರು-ಮಾಹಿತಿ ದೊರೆತಲ್ಲಿ ತಕ್ಷಣವೇ ಗಮನಕ್ಕೆ ತರಬೇಕು. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ಮೇಲೆ ತೀವ್ರ ನಿಗಾ ವಹಿಸಬೇಕು. ವಿದ್ಯುನ್ಮಾನ ಮಾಧ್ಯಮ ಹಾಗೂ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ದೃಶ್ಯಗಳ ಕುರಿತು ನಿಗಾ ವಹಿಸಿ ಪರಿಶೀಲನೆ ನಡೆಸಬೇಕು. ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣ ಕಂಡು ಬಂದಲ್ಲಿ, ಯಾವ ಪತ್ರಿಕೆ, ವಾಹಿನಿಗಳಲ್ಲಿ ಪ್ರಸಾರವಾಗಿರುವ ಕುರಿತು ದಾಖಲಿಸಬೇಕು. ಕಾಸಿಗಾಗಿ ಸುದ್ದಿ, ಮಾಹಿತಿ ಕ್ರೋಢೀಕರಿಸಬೇಕು. ಸಮಿತಿಯ ಎಲ್ಲ ಅಧಿಕಾರಿ-ಸಿಬ್ಬಂದಿಗಳು ಕಡ್ಡಾಯವಾಗಿ ಮಾಧ್ಯಮ ಪ್ರಮಾಣೀಕರಣ ಹಾಗೂ ಮಾಧ್ಯಮ ಕಣ್ಗಾವಲು ಕಾರ್ಯದಲ್ಲಿ ತೊಡಗಿಕೊಂಡು, ಚುನಾವಣೆ ಅತ್ಯಂತ ಜವಾಬ್ದಾರಿಯುತ ಕೆಲಸವಾಗಿರುವುದರಿಂದ ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಈ ಸಮಿತಿಯ ಅನುಮತಿ ಪತ್ರ ಹೊಂದಿರುವ ಜಾಹೀರಾತುಗಳನ್ನು ಮಾತ್ರ ಪ್ರಕಟಿಸಬೇಕು. ಅದರಂತೆ ಕಾಸಿಗಾಗಿ ಸುದ್ದಿಗಳನ್ನು ಪ್ರಕಟಿಸದಂತೆ ನೋಡಿಕೊಳ್ಳಬೇಕು. ಅನುಮತಿ ಪಡೆಯದೇ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳಿಂದ ಸಮೂಹ ಮಾಧ್ಯಮದಲ್ಲಿ ಜಾಹೀರಾತು ಪ್ರಕಟವಾಗದಂತೆ ನೋಡಿಕೊಳ್ಳಬೇಕು. ನೋಂದಾಯಿತ ರಾಜಕೀಯ ಪಕ್ಷಗಳು ಹಾಗೂ ನೋಂದಣಿಯಾಗಿರದ ರಾಜಕೀಯ ಪಕ್ಷಗಳು ಜಾಹೀರಾತು ಪ್ರಮಾಣಿಕರಣಕ್ಕೆ ಮುಂಚಿತವಾಗಿ ಅರ್ಜಿಯನ್ನು ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ರಾಜ್ಯ ಮಟ್ಟದಲ್ಲಿ ರಾಜ್ಯ ಮಟ್ಟದ ಎಂಸಿಎಂಸಿ ಸಮಿತಿಯು ಸಹ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾಸಿಗಾಗಿ ಸುದ್ದಿ ಪ್ರಕಟವಾದಲ್ಲಿ ಕಾನೂನಿನ್ವಯ ಕ್ರಮಕ್ಕೂ ಅವಕಾಶವಿದೆ. ಈ ಹಿನ್ನಲೆಯಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ್ ಮಾಧ್ಯಮಗಳು ಕಾಸಿಗಾಗಿ ಸುದ್ದಿಗಳನ್ನು ಪ್ರಕಟಿಸದಂತೆ ಹಾಗೂ ಪ್ರಚಾರಕ್ಕಾಗಿ ಜಾಹೀರಾತು ಪ್ರಕಟಿಸುವ ಮುನ್ನ ಕಡ್ಡಾಯವಾಗಿ ಎಂಸಿಎಂಸಿ ಸಮಿತಿಯಿಂದ ಅನುಮತಿಯನ್ನು ಪಡೆಯಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ನಗರಾಭಿವೃದ್ದಿ ಕೋಶದ ಸುರೇಶ ಉಪಸ್ಥಿತರಿದ್ದರು.