ಮಾಧ್ಯಮ ಪರಿಣಾಮಕಾರಿ ಸಾಧನ

(ಸಂಜೆವಾಣಿ ವಾರ್ತೆ)
ನವಲಗುಂದ,ಜ25 : ಪ್ರಜಾಪ್ರಭುತ್ವದ ಆಧಾರ ಸ್ಥಂಭ ವಾಗಿರುವ ಮಾಧ್ಯಮವು ಇಂದಿನ ಜಾಗತೀಕರಣ ಯುಗದಲ್ಲಿ ತಂತ್ರಜ್ಞಾನದ ಪ್ರಗತಿಯೊಂದಿಗೆ ಮಾಹಿತಿಯನ್ನು ಹರಡುವ ಅಥವಾ ಹಂಚಿಕೊಳ್ಳುವ ಅತ್ಯಂತ ಪರಿಣಾಮಕಾರಿಯಾದ ಸಾಧನವಾಗಿದೆ ಎಂದು ಪ್ರಾಂಶುಪಾಲರಾದ ಡಾ. ಎಂ.ಬಿ.ಬಾಗಡಿ ಹೇಳಿದರು.

ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ ಕ್ಯೂ ಎಸಿ ಪ್ರಾಯೋಜಿತ ರಾಜ್ಯಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ `ಮಾಧ್ಯಮ ಮತ್ತು ರಾಜಕೀಯ’ ಎಂಬ ವಿಷಯದ ಕಾರ್ಯಗಾರಉದ್ದೇಶಿಸಿ ಮಾತನಾಡಿದ ಅವರು ಸಮಾಜ ವಿರೋಧಿ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಉಂಟು ಮಾಡುವಲ್ಲಿ ಮಾಧ್ಯಮದ ಪಾತ್ರ ಅರ್ಥಪೂರ್ಣವಾಗಿದೆ ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎನ್ ಎನ್ ಕುರುಡೇಕರ ಮಾತನಾಡಿ ರಾಜಕೀಯ ಮತ್ತು ಮಾಧ್ಯಮ ಸಮಾಜದ ಎರಡು ಪ್ರಮುಖ ಘಟಕಗಳು. ರಾಜಕೀಯವು ಸಮಾಜದ ಅವಶ್ಯಕತೆಗಳನ್ನು ಅರಿತು ಅದಕ್ಕೆ ಪೂರಕವಾದ ತನ್ನ ನಿರ್ಧಾರಗಳನ್ನು ಕೈಕೊಳ್ಳುತ್ತದೆ.

ಮಾಧ್ಯಮ ರಾಜಕೀಯ ಕೈಗೊಂಡ ನಿರ್ಧಾರದ ವಿಮರ್ಶೆ ಹಾಗೂ ಮೌಲ್ಯಮಾಪನ ಮಾಡಿ ನಿರ್ಧಾರದ ಪರಿಣಾಮಗಳನ್ನು ಗುರುತಿಸಿ ಅದರ ಸತ್ಯ ಮತ್ತು ಅಸತ್ಯಗಳನ್ನು ಸಮಾಜಕ್ಕೆ ತಿಳಿಸುತ್ತದೆ. ಹೀಗಾಗಿ ಮಾಧ್ಯಮ ಸಾರ್ವಜನಿಕ ವೇದಿಕೆಯಾಗಿದ್ದು ಸಾರ್ವಜನಿಕರ ಮತ್ತು ವೈಯಕ್ತಿಕ ಅಭಿಪ್ರಾಯಗಳನ್ನು ಪುನರ್ ಅಭಿವ್ಯಕ್ತಪಡಿಸುವ ಮೂಲಕ ರಾಜಕೀಯ ಜನಾಭಿಪ್ರಾಯ ಮತ್ತು ಚರ್ಚೆಗಳನ್ನು ವ್ಯಾಪಕವಾಗಿ ಪ್ರಭಾವಿತಗೊಳಿಸಿದೆ ಎಂದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಬಸವರಾಜೇಶ್ವರಿ ಆರ್ ಪಾಟೀಲ್ ಮಾಧ್ಯಮ ಸ್ಥಳೀಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗಿನ ಸಂಕೀರ್ಣವಾದ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾರ್ವಜನಿಕರಿಗೆ ಸಹಾಯಮಾಡುತ್ತದೆ.

ಅಧಿಕಾರದ ದುರುಪಯೋಗದ ವಿರುದ್ಧ ಕಾವಲುವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಮೂಹ ಮಾಧ್ಯಮದ ಮಹತ್ವವನ್ನು ವಿವರಿಸುತ್ತಾ ಕ.ವಿ.ವಿ ಪಠ್ಯಕ್ರಮದಲ್ಲಿ ‘ ಮಾಧ್ಯಮ ಮತ್ತು ರಾಜಕೀಯ ‘ಎಂಬ ವಿಷಯವನ್ನು ಅಳವಡಿಸಲಾಗಿದ್ದು ವಿದ್ಯಾರ್ಥಿಗಳು ಮಾಧ್ಯಮದ ವರದಿಯು ವ್ಯಕ್ತಿ, ಸಮಾಜ, ಮತ್ತು ರಾಜ್ಯವನ್ನು ಯಾವ ರೀತಿ ಪ್ರಭಾವಿಸುತ್ತದೆ? ಎಂಬುದನ್ನು ಪರೀಕ್ಷಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸವಿತಾ ಜಲಗೇರಿ ಸ್ವಾಗತಿಸಿದರು. ರೇಣುಕಾ ಬಾಜಿರಾವುತ್ ವಂದಿಸಿದರು. ಕು ಸಾವಿತ್ರಿ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.