ಮಾಧ್ಯಮ ಕ್ಷೇತ್ರದ ಎಲ್ಲರಿಗೂ ನಿವೃತ್ತಿ ವೇತನ ನೀಡಲು ಒತ್ತಾಯ

ದಾವಣಗೆರೆ.ಜೂ.೫: ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವಂತಹ ಮಾಧ್ಯಮ ಕ್ಷೇತ್ರದ ಎಲ್ಲರಿಗೂ ನಿವೃತ್ತಿ ವೇತನ ಒದಗಿಸುವತ್ತ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಬ್ರಹ್ಮಕುಮಾರೀಸ್ ಸಂಸ್ಥೆಯ ಹುಬ್ಬಳ್ಳಿ ವಲಯದ ನಿರ್ದೇಶಕ ರಾಜಯೋಗಿ ಡಾ.ಬಸವರಾಜ ರಾಜಋಷಿ ತಿಳಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ೨೦೨೨ರ ಸಾಲಿನ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ,ವಿವಿಧ ಪ್ರಶಸ್ತಿಗಳ ಪುರಸ್ಕೃತ ಪತ್ರಕರ್ತರಿಗೆ ಗೌರವಾರ್ಪಣೆ, ಮಹಿಳಾ ಪತ್ರಕರ್ತರಿಗೆ ಸನ್ಮಾನ ಹಾಗೂ ಪತ್ರಕರ್ತರಿಗೆ ಧನಸಹಾಯ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಎಂದೇ ಕರೆಯಲ್ಪಡುವ ಮಾಧ್ಯಮ ಕ್ಷೇತ್ರ ಸರ್ಕಾರ, ಆಡಳಿತದ ಒಳ್ಳೆಯ ಕೆಲಸದ ಜೊತೆಗೆ ಲೋಪ ದೋಷದ ಬಗ್ಗೆ ಹೊರ ತರುವ ಮೂಲಕ ಸಮಾಜ ಸಮತೂಕದಿಂದ ನಡೆಯುವಂತೆ ಮಾಡುತ್ತಿದೆ. ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಪತ್ರಕರ್ತರಿಗೆ ಉತ್ತಮ, ಸಮರ್ಪಕ ನಿವೃತ್ತ ವೇತನ, ಇತರೆ ಸೌಲಭ್ಯ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಎಲ್ಲರಿಗೂ ನಿವೃತ್ತ ವೇತನ ದೊರೆಯುವ ವ್ಯವಸ್ಥೆಗೆ ಸರ್ಕಾರ ಮುಂದಾಗಬೇಕು ಎಂದರು.ದಾವಣಗೆರೆ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದಷ್ಟು ಬೇಗ ಸ್ವಂತ ಕಟ್ಟಡ ಹೊಂದುವಂತಾಗಲಿ. ಸಚಿವ ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಬಾಪೂಜಿ ವಿದ್ಯಾಸಂಸ್ಥೆ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಮಾಧ್ಯಮ ಕ್ಷೇತ್ರ ಸಮಾಜದ ಕನ್ನಡಿ, ಪ್ರತಿ ಬಿಂಬ ಮಾತ್ರವಲ್ಲ ಜನರ ಧ್ವನಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಹು ಮುಖ್ಯ ನಾಲ್ಕನೇ ಅಂಗವಾಗಿದೆ. ಅಂತಹ ಮಾಧ್ಯಮ ಕ್ಷೇತ್ರ ಸುಳ್ಳು, ಹಣ ಸಂದಾಯದ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡದೆ ಸಮಾಜದಲ್ಲಿ ಆಶಾಭಾವನೆ ಮೂಡಿಸುವ, ಶಾಂತಿ, ಸೌಹಾರ್ದತೆ ಬೆಳೆಸುವ, ಅಭಿವೃದ್ಧಿ ಚಿಂತನೆಯ ಸುದ್ದಿಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಗತ್ಯ ನಿವೇಶನದ ಬಗ್ಗೆ ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಡಿ.ವಿ. ಗುಂಡಪ್ಪ ಅವರು ೧೯೩೨ ರಲ್ಲಿ ಪ್ರಾರಂಭಿಸಿರುವ ರಾಜ್ಯ ಪತ್ರಕರ್ತರ ಸಂಘ ಈವರೆಗೆ ರಾಜ್ಯದ ಅನೇಕ ಪತ್ರಕರ್ತರ ಬೆನ್ನಿಗೆ ನಿಂತು ಕೆಲಸ ಮಾಡಿದೆ. ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ೫ ಲಕ್ಷ ಪರಿಹಾರ ಒದಗಿಸುವಲ್ಲಿ ಕೆಲಸ ಮಾಡಿದೆ. ಅನೇಕ ಸಂಕಷ    ಕ್ಕೆ ನೆರವಾಗಿದೆ. ಇದು ಎಲ್ಲವೂ ಸಾಧ್ಯವಾಗಿರುವುದು ಸಂಘಟನೆಯಿಂದ. ೮ ಸಾವಿರಕ್ಕೂ ಹೆಚ್ಚು ಸದಸ್ಯತ್ವ ಬಲ ಹೊಂದಿದೆ. ಈಗ ದಿನ ಬೆಳಗಾದರೆ ರಾಶಿ ರಾಶಿ ಪತ್ರಕರ್ತರು ಹೊರ ಬರುತ್ತಿದ್ದಾರೆ. ಜೊಳ್ಳು ಪತ್ರ ಕರ್ತರ ಗುರುತಿಸಿ ನಾವೇ ಶುದ್ಧಿ ಮಾಡದೇ ಹೋದಲ್ಲಿ ನೈಜ ಪತ್ರಕರ್ತರೇ ಮನೆಗೆ ಹೋಗುವ ಕಾಲ ಬರಲಿದೆ. ಹಾಗಾಗಿ ಸಂಘ ಬೇರೆ ಯಾವುದೋ ಉದ್ದೇಶಕ್ಕೆ ಬರುವಂತಹ ಪತ್ರಕರ್ತರಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಬಾಪೂಜಿ ವಿದ್ಯಾಸಂಸ್ಥೆ ಸದಸ್ಯ ಅಥಣಿ ಎಸ್. ವೀರಣ್ಣ ಮಾತನಾಡಿ, ತಮ್ಮ ಜೀವನವೂ ಪತ್ರಿಕಾ ವಿತರಣೆಯಿಂದಲೇ ಪ್ರಾರಂಭವಾಗಿದ್ದು, ಪತ್ರಿಕಾ ವಿತರಕರಿಗೆ ಅಗತ್ಯ ನೆರವು ನೀಡುವ ಕೆಲಸ ಮಾಡುವುದಾಗಿ ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ್ ಅಧ್ಯಕ್ಷತೆ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಸಂಚಾಲಕರಾದ  ಬ್ರಹ್ಮಕುಮಾರಿ ಲೀಲಾಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಮಹಾಂತೇಶ್ ಒಣರೊಟ್ಟಿ ಇತರರು ಇದ್ದರು.