ಮಾಧ್ಯಮದ ಪಾವಿತ್ರತೆ ಕಾಪಾಡುವಲ್ಲಿ ಸಂಜೆವಾಣಿ ಶ್ರಮ ಅಪಾರ: ಡಿ.ಸಿ ರಾಮಚಂದ್ರನ್

ಬೀದರ: ಇಂದು ವಾಣಿಜ್ಯದ ಕೇಂದ್ರಗಳಾಗಿ ಹೊರ ಹೊಮ್ಮುತ್ತಿರುವ ಮಾಧ್ಯಮ ಲೋಕವನ್ನು ಸರಿ ದಾರಿಯಲ್ಲಿಯೇ ಕೊಂಡೊಯ್ಯುತ್ತಿರುವ ಸಂಜೆವಾಣಿ ದಿನಪತ್ರಿಕೆಯ ಶ್ರಮ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ಅಭಿಪ್ರಾಯ ಪಟ್ಟರು.

ಇಂದು ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಸಂಜೆವಾಣಿ ದಿನ ಪತ್ರಿಕೆ ಹೊರ ತರುತ್ತಿರುವ ದೀಪಾವಳಿ ವಿಶೇಷಾಂಕ-2020ನ್ನು ಬಿಡುಗಡೆ ಮಾಡಿ ಮಾತನಾಡಿದರು.

ಮಾಧ್ಯಮಗಳು ತನ್ನ ನೈಜ ಜವಾಬ್ದಾರಿ ಮರೆತ ಕಾರಣ ಇಂದು ಸಮಾಜದಲ್ಲಿ ಭ್ರಷ್ಟಾಚಾರ, ಅಜಾರುಕತೆ, ಶೋಷಣೆ ಹಾಗೂ ದಬ್ಬಾಳಿಕೆ ಹೆಚ್ಚಾಗಲು ಕಾರಣವಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವದ ಅರ್ಥ ಕಳೆದುಕೊಳ್ಳುತ್ತಿದೆ. ಟಿ.ಆರ್.ಪಿ ಬೆನ್ನು ಬಿದ್ದು ಇಂದು ಮಾಧ್ಯಮಗಳು ತನ್ನ ಸೀಮೆ ಉಲ್ಲಂಘಿಸುತ್ತಿವೆ. ಇಂಥ ಸ್ತೀತಿಯಲ್ಲೂ ಕೆಲವು ಮಾಧ್ಯಮಗಳು ಪತ್ರಿಕೆಯ ಮರ್ಯಾದೆ ಕಾಪಾಡುತ್ತಿವೆ. ಅಂಥ ಯಾದಿಯಲ್ಲಿ ಸಂಜೆವಾಣಿ ಮುಂಚೂಣಿಯಲ್ಲಿದೆ ಎಂದರು.

ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆದರೂ ‘ಇಂದಿನ ಸುದ್ದಿ ಇಂದೇ’ ಎನ್ನುವ ಸಂಜೆವಾಣಿಯ ದ್ಯೆಯ ಮಾತ್ರ ಬದಲಾಗಿಲ್ಲ. 38 ವರ್ಷಗಳ ಹಿಂದೆ ನಾಡಿನ ಓದುಗರಿಗೆ ತಾಜಾ ಸುದ್ದಿಗಳು ಬಿತ್ತರಿಸಲು ಸಂಜೆವಾಣಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದ ಡಾ.ಬಿ.ಎಸ್ ಮಣಿ ಅವರು ಹಚ್ಚಿದ ಗಿಡ ಇಂದು ವಿಶಾಲವಾಗಿದೆ. 38 ವರ್ಷಗಳಲ್ಲಿಯೇ 11 ಲಕ್ಷ ಓದುಗರ ಮನ ಗೆಲ್ಲುವ ಮೂಲಕ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ಸು ಕಂಡ ಕಾರಣಕ್ಕಾಗಿ ಪತ್ರಿಕೆಯ ಸಂಪಾದಕರು, ವ್ಯವಸ್ಥಾಪಕ ಮಂಡಳಿಯವರು, ವರದಿಗಾರರು, ಜಾಹಿರಾತುದಾರರು ಮತ್ತು ವಿತರಕರಿಗೆ ಅಭಿನಂದನೆÉ ಸಮರ್ಪಿಸುವುದಾಗಿ ಡಿ.ಸಿ ತಿಳಿಸಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ಪತ್ರಿಕೆಗಳು ಎಷ್ಟೇ ವರದಿ ಮಾಡಿದರೂ ಅದನ್ನು ತಲುಪಿಸುವ ಕಾರ್ಯ ಆಗದಿದ್ದರೆ ಎಲ್ಲರ ಶ್ರಮ ವ್ಯರ್ಥವಾಗುತ್ತದೆ. ಸಂಜೆವಾಣಿ ಹೊರತುಪಡಿಸಿ ಮಿಕ್ಕೆಲ್ಲ ಪತ್ರಿಕೆಗಳ ವರದಿಗಾರರು, ಜಾಹಿರಾತುದಾರರು ಮತ್ತು ವಿತರಕರಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಆದರೆ ಸಂಜೆವಾಣಿ ದಿನಪತ್ರಿಕೆಯ ಬೀದರ್ ವರದಿಗಾರ ಶಿವಕುಮಾರ ಸ್ವಾಮಿ ಅವರು ಬೆಳಗ್ಗಿನ ಪತ್ರಿಕೆಗಳನ್ನು ಮೀರಿಸುವ ರೀತಿಯಲ್ಲಿ ಅಂದಿನ ಸುದ್ದಿ ಅಂದೇ ಬಿತ್ತರಿಸಿ ಪತ್ರಿಕೆ ಗ್ರಾಹಕರಿಗೆ ತಲುಪುತ್ತಿದೆ ಅಥವಾ ಇಲ್ಲ ಎಂಬುದನ್ನು ಕನಫಮ್ ಮಾಡುವ ಮೂಲಕ ಪತ್ರಿಕೆಯ ನೈಜ ಜಿಮ್ಮೆದಾರಿ ನಿಭಾಯಿಸುತ್ತಿರುವರು ಎಂದು ಪ್ರಶಂಸಿಸಿದರು.

ಸಾನಿಧ್ಯ ವಹಿಸಿದ ಬ್ರಹ್ಮಾಕುಮಾರಿ ರಾಜಯೋಗ ಕೇಂದ್ರ ಪಾವನಧಾಮ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಮಾತನಾಡಿ, ಮನುಷ್ಯನಲ್ಲಿನ ಅಜ್ಞಾನವೆಂಬ ಅಂಧಕಾರ ಅಳಿಸಿ ಹಾಕಲು ಸುಜ್ಞಾನವೆಂಬ ಜ್ಯೋತಿ ಪ್ರಜ್ವಲನೆ ಅಗತ್ಯ. ಅದು ಕೇವಲ ಬೆಳಗುವ ಹಣತೆಗೆ ಸೀಮಿತವಾಗದೆ ಜೀವನದಲ್ಲಿನ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಆತ್ಮಜ್ಯೋತಿ ಪ್ರಕಾಶಿಸಬೇಕು. ಇಂದು ಮಾಧ್ಯಮಗಳು ಸಹ ಅಧ್ಯಾತ್ಮದ ಬೀಜ ಜನ ಸಾಮಾನ್ಯರಲ್ಲಿ ಬಿತ್ತುವಂತಾದಲ್ಲಿ ನೈಜ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿಗಳೂ ಹಾಗೂ ಸಂಜೆವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಶಿವಕುಮಾರ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, 1982ರಲ್ಲಿ ಆರಂಭವಾದ ಸಂಜೆವಾಣಿ ದಿನ ಪತ್ರಿಕೆ ಇಂದು ತನ್ನ 39ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದೆ. ನಾಡಿನಾದ್ಯಂತ ಇಂದು 10 ಸಂಚಿಕೆಯೊಂದಿಗೆ ಸುಮಾರು 11 ಲಕ್ಷ ಓದುಗರನ್ನು ತಲುಪಿರುವುದು ನಮಗೆ ಹೆಮ್ಮೆ ಹಾಗೂ ಅಭಿಮಾನದ ಸನ್ನಿವೇಶ ಎಂದರು. ಪಾವನಧಾಮ ಕೇಂದ್ರದ ಹಿರಿಯ ಪ್ರವರ್ತಕ ಬಿ.ಕೆ ಪ್ರಭಾಕರ ಕೋರವಾರ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಪತ್ರಿಕೆಯ ಜಿಲ್ಲಾ ವರದಿಗಾರ ಶಿವಕುಮಾರ ಸ್ವಾಮಿ, ಕಾರ್ಯನಿರ್ವಾಹಕ ಶ್ರೀಕಾಂತ ಪಾಟೀಲ, ವಿತರಣಾ ವ್ಯವಸ್ಥಾಪಕ ಪರಮೇಶ್ವರ ಬಿರಾದಾರ ಹಾಗೂ ಛಾಯಾಗ್ರಾಹಕ ಗೋಪಿಚಂದ್ ತಾಂದಳೆ ಅವರನ್ನು ಸನ್ಮಾನಿಸಲಾಯಿತು.

ಆರಂಭದಲ್ಲಿ ಕೇಂದ್ರದ ಸಹೋದರಿಯರಾದ ಬಿ.ಕೆ ಮಂಗಲಾ ಬಹೆನ್ ಸ್ವಾಗತಿಸಿ, ಬಿ.ಕೆ ಗುರುದೇವಿ ಅಕ್ಕನವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೇಂದ್ರದ ಸಹೋದರ, ಸಹೋದರಿಯರು, ಸಂಜೆವಾಣಿ ಪತ್ರಿಕೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.