
ದಾವಣಗೆರೆ.ಮಾ.೩೧: ಪ್ರಚೋದನೆಗೆ ಎಡೆಮಾಡದೆ ಸಮಾಜಕ್ಕೆ ಸತ್ಯ ಸಂಗತಿಗಳನ್ನು ತಿಳಿಸುವ ಹೊಣೆಯಿರುವ ಮಾಧ್ಯಮದಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದೆ ಎಂದು ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಸೂಚ್ಯವಾಗಿ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಮತ್ತು ಪತ್ರಕರ್ತೆಯರ ಸವಾಲುಗಳು ವಿಷಯ ಕುರಿತು ಅವರು ಮಾತನಾಡಿದರು. ಹಿಂದೆ ಪತ್ರಿಕೋದ್ಯಮ ನೈತಿಕತೆಯ ಜೊತೆಗೆ ಬದ್ಧತೆ ಮೆರೆಯುತ್ತಲಿತ್ತು. ಪ್ರಚೋದನೆಗೆ ಅವಕಾಶ ಕೊಡದಂತೆ ಸತ್ಯ ಸಂಗತಿಯನ್ನ ಸಮಾಜಕ್ಕೆ ತಿಳಿಸಬೇಕಿತ್ತು. ಈಗ ಅಂತ ಪತ್ರಿಕೋದ್ಯಮವನ್ನ ದುರ್ಬೀನ್ ಹಾಕಿಕೊಂಡು ಹುಡುಕಿದರೂ ಸಿಗುತ್ತಿಲ್ಲ. ಎಲ್ಲಾ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಕೆಲ ವಿಚಾರದಲ್ಲಿ ರಾಜಕೀಯ ಹಿಡಿತಕ್ಕೆ ಸಿಕ್ಕಿ ನರಳುತ್ತಿದ್ದು, ರಾಜಕೀಯ ಪಕ್ಷಗಳ ಮುಖವಾಣಿಯಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.ಮಹಿಳೆ ಭಾವನಾತ್ಮಕತೆಯಿಂದ ಕೂಡಿರುವವಳು. ಕುಟುಂಬದೊಂದಿಗೂ ಅತ್ಯಂತ ಸೂಕ್ಷ್ಮವಾಗಿ, ಸಂಯಮದಿಂದ ವರ್ತಿಸಿ ಎಂಥ ಕಠಿಣ ಸನ್ನಿವೇಶವನ್ನು ತಿಳಿಗೊಳಿಸುತ್ತಾಳೆ. ಹೆಣ್ಣುಮಕ್ಕಳು ಸಮಾಜದಲ್ಲಿರುವ ವಿಷಯಗಳನ್ನು ತುಲನಾತ್ಮಕವಾಗಿ ನೋಡಿ, ಭಾವನಾತ್ಮಕವಾಗಿ ಯೋಚಿಸುವುದರಿಂದ ಸಮಾಜದಲ್ಲಿ ಪ್ರಚೋದನೆಗೆ ಅವಕಾಶ ನೀಡದ ಹಾಗೆ ಸುದ್ದಿ ಮಾಡುವ ಕಲೆಯು ಅವರಿಗೆ ತಿಳಿದಿರುತ್ತದೆ ಎಂದು ಅಭಿಪ್ರಾಯಿಸಿದರು. ಸಮಾಜದಲ್ಲಿ ಪತ್ರಕರ್ತನ ಪಾತ್ರ ತುಂಬಾ ದೊಡ್ಡದು. ಸಿನಿಮಾದಲ್ಲಿ ನೀಡುವ ಒಂದು ಸಂದೇಶ ಸಮಾಜವನ್ನು ಹೇಗೆ ಬದಲಿಸುತ್ತದೆಯೋ ಹಾಗೆ ಅದೇ ಮಾದರಿ ಪತ್ರಿಕೋದ್ಯಮದ ಮೇಲಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಪತ್ರಿಕೋದ್ಯಮದ ಕೆಲಸ ಎಂದು ಹೇಳಿದರು. ಮಹಿಳೆಯರು ಇಂದು ನಾಲ್ಕು ಗೋಡೆಯ ಮಧ್ಯೆ ಇರದೇ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಲು ಸಾವಿತ್ರಾ ಬಾಪುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ. ಹಿಂದೆ ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣ ಸಿಕ್ಕರೆ ಅವರು ದೌರ್ಜನ್ಯವನ್ನು ಪ್ರಶ್ನಿಸುತ್ತಾರೆ. ಸ್ವಾತಂತ್ರರಾಗುತ್ತಾರೆ ಎಂಬ ಕಾರಣಕ್ಕೆ ಅಕ್ಷರಕ್ಕೆ ಅನುಕೂಲ ಇರಲಿಲ್ಲ. ಆದರೆ, ಸಾವಿತ್ರಿ ಬಾಪುಲೆ ಅವರಿಂದ ಇಂದು ಹೆಣ್ಣುಮಕ್ಕಳು ಅಕ್ಷರ ಕಲಿಯಲು ಅವಕಾಶ ಸಿಕ್ಕಿತು ಎಂದು ಸ್ಮರಿಸಿದರು. ಮತದಾನದ ಹಕ್ಕು ಮಹಿಳೆಗೆ ಇರಲಿಲ್ಲ ಆದರೆ, ದೇಶದಲ್ಲಿರುವ ಅಸಮಾನತೆ, ಜಾತಿಯತೆ ಬಗ್ಗೆ ತಿಳಿದಿದ್ದ ಬಾಬಾಸಾಹೇಬರು ಹೆಣ್ಮಕ್ಕಳಿಗೆ ಮತದಾನದ ಹಕ್ಕನ್ನು ನೀಡಿದರು. ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಕಾನೂನು ತಂದರು. ಆದರೆ, ಕೆಲವು ಕಡೆಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಈಗಲೂ ಸಮಾನವೇತನ ಸಿಗುತ್ತಿಲ್ಲ. ಆದ್ದರಿಂದ ಮಹಿಳೆಯರು ಒಟ್ಟುಗೂಡಿಕೊಂಡು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟೀನ್ ಡಿಸೌಜ ಮಾತನಾಡಿ, ತಾವು ಪತ್ರಿಕಾದ್ಯೋಮದಲ್ಲಿ ಕಾರ್ಯನಿರ್ವಹಿಸಿದಾಗ ಸಾಕಷ್ಟು ಅಡೆತಡೆ, ಕುಹಕಗಳನ್ನು ಎದುರಿಸಿದ್ದೇನೆ. ಪತ್ರಕರ್ತೆಯಾದಾಗ ಸಾಕಷ್ಟು ಸವಾಲುಗಳಿದ್ದವು. ೧೯೭೮ ರಲ್ಲಿ ತಮ್ಮ ಪತಿ ಶಿವಣ್ಣ ಅವರು ಸೌರಭ ಮತ್ತು ಪ್ರಜಾಭಿಮತ ಎಂಬ ಎರಡು ಪತ್ರಿಕೆ ಶುರುಮಾಡಿದ್ದರು. ಆಗ ಕಾರ್ಯನಿರ್ವಹಿಸುವ ವೇಳೆ ಮಹಿಳೆ ಈಕೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬಲ್ಲಳೇ ಎಂದು ಪುರುಷರು ಮಾತಾಡಿಕೊಳ್ಳುತ್ತಿದ್ದರು. ಸಾಹಿತ್ಯದ ಹಿನ್ನೆಲೆಯಿಂದ ಬಂದಿರುವ ನನಗೆ ಪತ್ರಿಕೋದ್ಯಮದ ಬರವಣಿಗೆ ಕಷ್ಟವೆನಿಸಲಿಲ್ಲ. ನನ್ನ ವರದಿಗಳನ್ನು ಕಂಡಾಗ ಆಡಿಕೊಂಡವರೆಲ್ಲಾ ಸೋಜಿಗ ಪಟ್ಟರು ಎಂದು ಹೇಳಿದರು.ಪತ್ರಕರ್ತರಿಗೆ ಸತ್ಯನಿಷ್ಟ ವರದಿ ಕೊಡುವುದೇ ಬಹುದೊಡ್ಡ ಸವಾಲು. ಸತ್ಯಪರತೆ ವರದಿ ನೀಡಿದರೆ ಬೆದರಿಕೆ ಕರೆಗಳನ್ನು ಅವರು ಅನುಭವಿಸಬೇಕಾಗುತ್ತದೆ. ಹೀಗಿದ್ದೂ ಇಂಥ ಸವಾಲಿನ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು.ಸಂಘದ ಉಪಾಧ್ಯಕ್ಷೆ ಜೆ. ವಾಣಿಶ್ರೀ ಪ್ರಸ್ತಾವಿಕ ನುಡಿದು, ಒಂದೇ ಸೂರಿನಡಿ ಪತ್ರಕರ್ತೆಯರನ್ನ ತರಬೇಕೆಂಬ ಚಿಂತನೆಯಿಂದ ಸಂಘ ಪ್ರಾರಂಭಿಸಲಾಯಿತು. ೨೦೧೮ರ ನ. ೨೯ರಂದು ಸಂಘ ನೋಂದಣಿಯಾಯಿತು. ೨೦೨೩ ರಂದು ಅಧಿಕೃತ ಆರಂಭಿಸಲಾಯಿತು. ಇಲ್ಲಿ ಮುದ್ರಣ, ಎಲೆಕ್ಟ್ರಾನಿಕ್ಸ್, ವೆಬ್ ಮಾಧ್ಯಮದಲ್ಲಿ ಕಾರ್ಯನಿರ್ವಯಿಸುತ್ತಿರುವ ಪತ್ರಕರ್ತೆಯರು ನೋಂದಣಿಯಾಗಿದ್ದು, ಈಗಾಗಲೇ ಅನೇಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಸ್ತೂರಿ ಟಿವಿಯ ಶಾಂತಲಾ ಭಟ್ ಸಂಘಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದು, ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಧ್ಯೇಯೋದ್ದೇಶವಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎ.ಎಸ್. ಶೈಲಜಾ ವಹಿಸಿಕೊಂಡಿದ್ದರು, ಸಹಾಯಕ ಪ್ರಾಧ್ಯಾಪಕಿ ಡಾ. ಕಾವ್ಯಶ್ರೀ ಉಪಸ್ಥಿತರಿದ್ದರು. ಎಚ್. ಅನಿತಾ ಸ್ವಾಗತಿಸಿದರು, ಕಾವ್ಯ ಬಿ.ಕೆ. ಪ್ರಾರ್ಥಿಸಿದರು, ಬಿ. ಸುಮಾ, ತೇಜಸ್ವಿನಿ ಮತ್ತು ಎ.ಬಿ. ರುದ್ರಮ್ಮ ಅತಿಥಿಗಳ ಪರಿಚಯಿಸಿದರು, ಸ್ಮಿತಾ ಶಿರೂರು ಅತಿಥಿಗಳಿಗೆ ಗೌರವಿಸಿದರು, ದೇವಿಕಾ ನಿರೂಪಿಸಿದರು, ಭಾರತಿ ವಂದಿಸಿದರು.