ಮಾಧ್ಯಮಕ್ಕೆ ಸಕಾಲದ ಜ್ಞಾನದ ಜೊತೆಗೆ
ಬರೆಯುವ ಮಾತನಾಡುವ ಕೌಶಲ್ಯ ಅಗತ್ಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,5- ಮಾಧ್ಯಮದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು  ಸಕಾಲದ, ಸ್ಥಳೀಯ ದಿನ ನಿತ್ಯದ  ಆಗುಹೋಗುಗಳ ಜ್ಞಾನದ ಜೊತೆ ಬರವಣಿಗೆಯ ಕೌಶಲ್ಯ ಅತ್ಯವಶ್ಯ ಎಂದು 
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ  ಹಿರಿಯ ಪತ್ರಕರ್ತ ಎನ್.ವೀರಭದ್ರ ಗೌಡ   ಹೇಳಿದರು.
ಅವರು ಇಂದು ನಗರದ  ಸರಳದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಂಡಿದ್ದ ವರದಿಗಾರರ ಕೌಶಲ್ಯಗಳು ಎನ್ನುವ ವಿಷಯ ಕುರಿತು ಮಾತನಾಡುತ್ತಿದ್ದರು.
ಮಾತೃ ಭಾಷೆಯ ಇತರೇ ಭಾಷೆಗಳನ್ನು ಓದುವ, ಬರೆಯುವ, ಮಾತನಾಡವುದು ಅವಶ್ಯ.  ಜೊತೆಗೆ ದಿನ ನಿತ್ಯ  ಪತ್ರಿಕೆ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.
ಪದವಿಯಲ್ಲಿ ಅಂಕಗಳಿಗಿಂತ  ವರದಿ ಪಡಿಸುವ ಕೌಶಲ್ಯ ಮುಖ್ಯ. ಕೌಶಲ್ಯ ಇದ್ದರೆ ಎಲ್ಲಾದರು ಬದುಕಬಹುದು ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ವೈ.ಜನಾರ್ದನ ರೆಡ್ಡಿ ಮಾತನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ,  ಸಾಮಾಜಿಕ ಜಾಲತಾಣಗಳಿಂದ ಇಂದಿನ ಯುವಕರು ಪತ್ರಿಕೆ ಓದುವ ಮತ್ತು ದೂರದರ್ಶನ ನೋಡುವುದನ್ನು ಕಡಿಮೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ವಿಷಯಗಳ ಬಗ್ಗೆ ವಿಷಯ ಮಂಡನೆ ಮಾಡುವ, ವಿಶ್ಲೇಷಣೆ ಮಾಡುವ ಸಾಮರ್ಥ್ಯ ಬೆಳಸಿಕೊಳ್ಳಬೇಕೆಂದರು‌.
ಖಾಸಗಿ ಸುದ್ದಿವಾಹಿನಿಯ ಜಿಲ್ಲಾ ವರದಿಗಾರ ನರಸಿಂಹಮೂರ್ತಿ ಕುಲಕರ್ಣಿ ಅವರು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ  ಅನೇಕ ಅವಕಾಶಗಳು ಇವೆ. ಅದರಲ್ಲಿ ವಾಯ್ಸ್ ಓವರ್ ನೀಡುವವರಿಗೆ ಹೆಚ್ಚಿನ ಬೇಡಿಕೆ ಇದೆ. ದೂರದರ್ಶನದಲ್ಲಿ 50 ರಿಂದ 70 ಪದಗಳ ಒಳಗೆ ಸುದ್ದಿಗಳನ್ನು ಬರೆಯುವ ಕೌಶಲ್ಯ ಬೆಳಸಿಕೊಳ್ಳಬೇಕು ಎಂದರು. ವರದಿಗಾರರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ ಅದನ್ನು ಉಳಿಸಿಕೊಂಡು ಹೋಗಬೇಕೆಂದರು. 
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಭಾರ ಪ್ರಾಂಶುಪಾಲರಾದ ಡಾ. ಶೈಲಜಾ ಅವರು,  ವಿದ್ಯಾರ್ಥಿಗಳಿಗೆ ಉಪನ್ಯಾಸಕರಾದವರು ಕೌಶಲ್ಯಗಳ ಬಗ್ಗೆ  ಪ್ರೋತ್ಸಾಹ ನೀಡುವ ಕಾರ್ಯಮಾಡಬೇಕು. ಭಾವನೆಗಳನ್ನು ಹೊರಹಾಕಲು ಬರಹದಿಂದ ಮಾತ್ರ ಸಾಧ್ಯ  ಅದುವೆ ಅಭಿವ್ಯಕ್ತಿ ಸ್ವಾತಂತ್ರ್ಯ ಆಗಿದೆ‌ಂದರು.‌
ಪತ್ರಿಕೋದ್ಯಮ  ಉಪನ್ಯಾಸಕರಾದ ಜಯರಾಮ್.ಟಿ, ಗಿರೀಶ್ ಕುಮಾರ್ ಗೌಡ ಹಾಗೂ ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ವಿಷಯದ ವಿದ್ಯಾರ್ಥಿಗಳು ಹಾಜರಿದ್ದರು.

One attachment • Scanned by Gmail