ಮಾಧವ್ ಗೋಶಾಲೆಯಿಂದ ಹಣತೆ ತಯಾರಿಕೆ: ಪರಿಸರ ರಕ್ಷಣೆಯೊಂದಿಗೆ ಮಹಿಳೆಯರಿಗೂ ಉದ್ಯೋಗ

ಕಲಬುರಗಿ, ನ.2: ಬೆಳಕಿನ ಹಬ್ಬ ದೀಪಾವಳಿಗೆ ಮೆರುಗು ಸಿಗುವುದು ಪಟಾಕಿ ಮತ್ತು ಹಣತೆಗಳಿಂದ. ಆದಾಗ್ಯೂ, ಜನರು ಪ್ಲಾಸ್ಟಿಕ್ ಹಣತೆಗೆ ಮೊರೆ ಹೋಗುತ್ತಿರುವುದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಮತ್ತು ಮಣ್ಣಿನ ಹಣತೆ ಮೇಲಿನ ಬೇಡಿಕೆ ಕುಗ್ಗುತ್ತಿದೆ. ಅದನ್ನು ತಪ್ಪಿಸಲು ನಗರದ ಹೊರವಲಯದಲ್ಲಿನ ಗೋಶಾಲೆಯೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಪರಿಸರ ರಕ್ಷಣೆಯೊಂದಿಗೆ ಮಹಿಳೆಯರಿಗೂ ಉದ್ಯೋಗ ನೀಡಿ ಆಸರೆಯಾಗುತ್ತಿದೆ.
ನಗರದ ಹೊರವಲಯದ ಕುಸನೂರಿನಲ್ಲಿರುವ ಶ್ರೀ ಮಾಧವ್ ಗೋಶಾಲೆಯಲ್ಲಿ ಹಣತೆಗಳನ್ನು ತಯಾರಿಸಲಾಗುತ್ತಿದೆ. ಗೋವುಗಳ ಸೆಗಣಿ ಮತ್ತು ಗಂಜಲದಿಂದ ವಿಭೂತಿ, ಔಷಧಿಯಂತಹ ಅನೇಕ ಉಪಯುಕ್ತ ವಸ್ತುಗಳನ್ನು ತಯಾರು ಮಡುವ ಮೂಲಕ ಗೋಶಾಲೆಯಲ್ಲಿ ಇದೀಗ ಹಣತೆ ತಯಾರಿಕೆಯೂ ಸಹ ಮಾಡಲಾಗುತ್ತಿದೆ.
ಸೆಗಣಿ ಬಳಸಿಕೊಂಡು ಬಗೆಬಗೆಯ ವರ್ಣಗಳಲ್ಲಿ ಹಣತೆ ತಯಾರಿಸಿ ಜನರಿಗೆ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಹತ್ತಾರು ಮಹಿಳೆಯರಿಗೆ ಹಣತೆ ತಯಾರಿಸುವ ತರಬೇತಿ ನೀಡಲಾಗಿದೆ. ಸೆಗಣಿ ಸೇರಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿಯೇ ಕುಳಿತು ಹಣತೆ ತಯಾರಿಸಿ ಸಂಪಾದನೆ ಮಾಡುತ್ತಿದ್ದಾರೆ. ಗೋಶಾಲೆಯ ಮಾದರಿ ಕಾರ್ಯದಿಂದ ಜನರಿಗೆ ಕಡಿಮೆ ಬೆಲೆಯಲ್ಲಿ ಪರಿಸರ ಸ್ನೇಹಿ ಹಣತೆ ದೊರೆತರೆ, ಇನ್ನೊಂದೆಡೆ ಮಹಿಳೆಯರಿಗೆ ಉದ್ಯೋಗ ಸಿಕ್ಕಂತಾಗಿದೆ.
ಗೋಶಾಲೆಯ ಹೊಣೆ ಹೊತ್ತಿರುವ ಮಹೇಶ್ ಬಿದರಕರ್ ಅವರು ವೃತ್ತಿಯಲ್ಲಿ ಕಾಲೇಜು ಉಪನ್ಯಾಸಕರಾಗಿದ್ದಾರೆ. ಜಾನುವಾರುಗಳ ಮೇಲಿನ ಪ್ರೀತಿಗೆ ಗೋಶಾಲೆ ಆರಂಭಿಸಿದ್ದಾರೆ. ನೂರಾರು ಜಾನುವಾರುಗಳು ಸದ್ಯ ಗೋಶಾಲೆಯಲ್ಲಿವೆ. ಆದಾಘ್ಯೂ, ಅವಾವು ಖರೀದಿಸಿ ತಂದಿರುವುದಿಲ್ಲ. ದೈಹಿಕ ಅಂಗಾಂಗ ವೈಫಲ್ಯ, ವೃದ್ದಾಪ್ಯ ವಯಸ್ಸಿನ ಜಾನುವಾರು, ಅನಾರೋಗ್ಯ ಪೀಡಿತ ಜಾನುವಾರು ಹೀಗೆ ರೈತರಿಗೆ ಉಪಯೋಗಕ್ಕೆ ಬಾರದೇ ಹೊರೆಯಾಗುವ ಜಾನುವಾರುಗಳನ್ನು ತಂದು ಪೋಷಣೆ ಮಾಡುತ್ತಿದ್ದಾರೆ. ಅಗತ್ಯ ಚಿಕಿತ್ಸೆ ಕೊಡಿಸಿ ರಕ್ಷಣೆ ಮಾಡುತ್ತಿದ್ದಾರೆ.
ಜಾನುವಾರುಗಳ ಸೆಗಣಿಯಿಂದ ಹಲವು ಪರಿಸರ ಸ್ನೇಹಿ, ಜನರ ಆರೋಗ್ಯ ರಕ್ಷಣೆ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಸೆಗಣಿಯಿಂದ ವಿಭೂತಿ, ಪಾಂಚಜನ್ಯ, ಗಣೇಶಮೂರ್ತಿ, ಉಡುಗೊರೆ ವಸ್ತುಗಳೂ ಸೇರಿದಂತೆ ಹಲವು ದಿನ ಬಳಕೆ ವಸ್ತುಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ಹಲವರಿಗೆ ಉದ್ಯೋಗ ಕೂಡ ಸಿಕ್ಕಿದೆ.
ಮಾಧವ್ ಗೋಶಾಲೆ ಕೇವಲ ಗೋರಕ್ಷಣೆಗೆ ಮಾತ್ರ ಸೀಮಿತವಾಗಿರದೇ ಹಲವು ಬಗೆಯ ವಸ್ತುಗಳನ್ನು ತಯಾರಿಸಿ ಪರಿಸರಕ್ಕೆ ಮತ್ತು ಮಾನವ ಸಂಕುಲಕ್ಕೆ ಕೊಡುಗೆ ನೀಡುತ್ತಿದೆ. ಹತ್ತಾರು ಕೈಗಳಿಗೆ ಉದ್ಯೋಗ ಸಹ ಕೊಡುವ ಮೂಲಕ ಹಲವು ಕುಟುಂಬಗಳಿಗೆ ಆಧಾರ ಸ್ತಂಭವಾಗಿ ನಿಂತಿದೆ. ಈಗ ಪರಿಸರ ಸ್ನೇಹಿ ಹಣತೆ ನೀಡಲು ಮುಂದೆ ಬಂದಿದ್ದು, ನಿಜಕ್ಕೂ ಉತ್ತಮ ಕಾರ್ಯ.