ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ಧ: ಬಿ.ಆರ್.

ಆಳಂದ:ಜೂ.1: ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸಮಾಜ ಬಾಂಧವರು ಒಗ್ಗೂಡಿ ಶಿಕ್ಷಣ, ಸಂಘನೆ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು ಎಂದು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ಲಿಂಗಾಯತ್ ಭವನದಲ್ಲಿ ಶುಕ್ರವಾರ ತಾಲೂಕು ಮಾದಿಗ ಸಮಾಜ ಆಯೋಜಿಸಿದ್ದ ಹಸಿರು ಕ್ರಾಂತಿ ಹರಿಹಾರ, ಮಾಜಿ ಉಪಪ್ರಧಾನಿ ಡಾ. ಬಾಬುಜಗಜೀವನರಾಮ್ ಅವರ 117ನೇ ಜಯಂತಿ ಸಮಾರಂಭವನ್ನು ಉದ್ಘಾಟಿದರಲ್ಲದೆ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಕೀರ್ತಿ ಪ್ರಾಯ ಡಾ. ಬಾಬು ಜಗಜೀವನರಾಮರು ದೇಶಕ್ಕೆ ಹಸಿರು ಕ್ರಾಂತಿ ತರುವ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಕಂಡ ಕನಸು ನನಸು ಮಾಡಲು ಪ್ರತಿಯೊಬ್ಬರು ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸಬೇಕು. ಸರ್ಕಾರದಿಂದ ಕ್ಷೇತ್ರದಲ್ಲಿ ಮಾದಿಗ ಸಮಾಜಕ್ಕೆ ಬರುವ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದು ಸರ್ವರು ಒಗ್ಗೂಡಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಅವರ ಭವಿಷ್ಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನಿಡಿದರು.
ಸಮಾಜ ಜಿಲ್ಲಾ ಮುಖಂಡ ಅಂಬರಾಯ ಚಲಗೇರಾ ಮಾತನಾಡಿ, ಡಾ. ಬಾಬುಜಿ ಜೀವನ ಅನುಸರಿಸುವ ಮೂಲಕ ಸಮಾಜ ಬಾಂಧವರು ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.
ಜಯಂತಿ ಸಮಿತಿಯ ಅಧ್ಯಕ್ಷ ಬಸವರಾಜ ಕೆ. ಜವಳಿ, ರಾಜ್ಯ ಕಾಂಗ್ರೆಸ್ ಸ್ಟಾರ್ ಪ್ರಚಾರಕ ಅಂಬಣ್ಣಾ ಅರೋಲಿಕರ್ ಮಾತನಾಡಿದರು.
ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು, ಚನ್ನು ಕಾಳಕಿಂಗೆ, ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯೆ ರುಕ್ಮೀಣಿ ಆರ್. ಕಟ್ಟಿಮನಿ, ಸಂದೀಪ ಪಾತ್ರೆ, ಚಿಂಚನಸೂರ ಗ್ರಾಪಂ ಅಧ್ಯಕ್ಷ ಕಸ್ತೂರಬಾಯಿ ಹುಲಿಮನಿ, ಹಿರೋಳಿ ಅಧ್ಯಕ್ಷ ರಂಜಾಬಾಯಿ ಸಿಂಧೆ, ಹಿರಿಯ ಮುಖಂಡ ಮಹಾಂತಪ್ಪ ಸಾಲೇಗಾಂವ, ಸಿದ್ಧು ಎಲೆನಾವದಗಿ, ಜಯಂತಿ ಸಮಿತಿ ಗೌರವ ಅಧ್ಯಕ್ಷ ಕೃಷ್ಣಾ ಪಾತ್ರೆ, ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಜು ಕಟ್ಟಿಮನಿ, ಮಲ್ಲಪ್ಪ ಎಂ. ದೊಡ್ಡಮನಿ, ಓಂ ಪ್ರಕಾಶ ಪಾತ್ರೆ, ಸಂಜಯಕುಮಾರ ಸಾಲೇಗಾಂವ ಸೇರಿ ಸಂದೀಪ ಪಾತ್ರೆ ಮೊದಲಾದವರು ಉಪಸ್ಥಿತರಿದ್ದರು.
ಲಕ್ಕಪ್ಪ ಎಸ್. ಜವಳಿ ಸ್ವಾಗತಿಸಿದರು. ರಾಜು ಪಡಸಾವಳಿ ವಂದಿಸಿದರು. ವೇದಿಕೆಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಉತ್ಸವ ಸಮಿತಿಯ ಪರ ಸನ್ಮಾನಿಸಿ ಗೌರವಿಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು.