ಮಾದಿಗ ಮಹಾಸಭಾ ತಾಲ್ಲೂಕು ಘಟಕ ವಿಸರ್ಜನೆ

ಮಾನ್ವಿ.ಏ.೦೮-‘ಕರ್ನಾಟಕ ರಾಜ್ಯ ಮಾದಿಗ ಮಹಾಸಭಾ ತಾಲ್ಲೂಕು ಘಟಕವನ್ನು ವಿಸರ್ಜಿಸಲಾಗಿದೆ’ ಎಂದು ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭುರಾಜ ಕೊಡ್ಲಿ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ ಮಾನ್ವಿ ತಾಲ್ಲೂಕಿನಲ್ಲಿ ಸಂಘಟನೆಯನ್ನು ಬಲಪಡಿಸಲು ತಾಲ್ಲೂಕು ಘಟಕದ ಪುನರ್ರಚನೆ ಹಾಗೂ ಪದಾಧಿಕಾರಿಗಳ ನೇಮಕಕ್ಕೆ ನಿರ್ಧರಿಸಲಾಗಿದೆ. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ ನೇತೃತ್ವದಲ್ಲಿ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.
‘ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸ್ಸು ಜಾರಿಗೆ ಬಿಜೆಪಿ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸುವಂತೆ ಮಾದಿಗ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಅವರು ಹೇಳಿದರು.
ಸಂಘಟನೆಯ ಪದಾಧಿಕಾರಿಗಳಾದ ಮಲ್ಲೇಶ ಮಾಚನೂರು, ಹನುಮಂತ ಜಗ್ಲಿ, ಜಯರಾಜ್ ಕೊಡ್ಲಿ, ಸುರೇಶ ತುಪ್ಪದೂರು, ಶಂಕರ್ ಜಗ್ಲಿ, ಸುರೇಶ ಮುಸ್ಟೂರು ಮತ್ತಿತರರು ಇದ್ದರು.