ಮಾದಿಗ ದ್ರೋಹಿ ಕಾಂಗ್ರೆಸ್ :ರವಿಚಂದ್ರ ಕಾಂತಿಕರ್ ಆಕ್ರೋಶ

ಕಲಬುರಗಿ,ಜ.19: ಮುಖ್ಯಮಂತ್ರಿ ಸಿದ್ಧರಾಮಯ್ಯ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯ ಕುರಿತು ತೆಗೆದುಕೊಂಡಿರುವ ನಿರ್ಧಾರ ದಲಿತರನ್ನು ಓಟುಬ್ಯಾಂಕಾಗಿ ಬಳಸಿಕೊಳ್ಳುವ ಕಾಂಗ್ರೆಸ್ಸಿನ ಕಪಟನೀತಿ ಬಯಲಿಗೆ ಬಂದಿದೆ ಎಂದು ರಾಜ್ಯ ಬಿಜೆಪಿ ಎಸ್‍ಸಿ ಮೋರ್ಚಾದ ಮುಖಂಡ ರವಿಚಂದ್ರ ಕಾಂತಿಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪ್ರಸ್ತುತವಾಗಿರುವ 341 ನೇ ವಿಧಿಯ ತಿದ್ದುಪಡಿಯ ಗುಮ್ಮವನ್ನು ತೋರಿಸಿ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಮೋಸ ಮಾಡಿದೆ.ಶೇ 15 ರ ಮೀಸಲಾತಿಯನ್ನು ವರ್ಗೀಕರಿಸಿದ್ದ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಏನೂ ಮಾಡದ ಸಿದ್ಧರಾಮಯ್ಯನವರ ಸರ್ಕಾರ ಈಗ ಕೈಚೆಲ್ಲಿಕೂತಿದೆ . ತನ್ನ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ಮಾದಿಗ ದ್ರೋಹಿ ಕಾಂಗ್ರೆಸ್ ಈಗ 2008 ರ ಉಷಾ ಮೆಹ್ರಾ ವರದಿ ಹೇಳಿದಂತೆ ಸಂವಿಧಾನದ 341ವಿಧಿಗೆ ತಿದ್ದುಪಡಿ ತರಬೇಕು . ಅದಕ್ಕಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಪತ್ರ ಬರೆಯುವುದಾಗಿ ಹೇಳುತ್ತಿದೆ . ಇದು ಕಪಟ ನಾಟಕವಲ್ಲದೇ ಬೇರೇನು ಅಲ್ಲ ಎಂದಿದ್ದಾರೆ.
2020 ಆಗಸ್ಟ್ 27 ರಂದು ಸುಪ್ರೀಂಕೋರ್ಟಿನ ನ್ಯಾ ಅರುಣ್ ಮಿಶ್ರಾ ನೇತೃತ್ವದ ಪಂಚಪೀಠ ಮೀಸಲಾತಿಯ ವರ್ಗೀಕರಣದ ವಿಷಯದಲ್ಲಿ 341 ನೇ ವಿಧಿಯ ತಿದ್ದುಪಡಿಯ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ . ಈ ಐತಿಹಾಸಿಕ ತೀರ್ಪು ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ವಿಚಾರಣೆಗೆ ಬಂದಿರುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂತಹದೊಂದು ಅಗ್ಗದ ನಿರ್ಣಯ ಕೈಗೊಂಡು ನಗೆಪಾಟಿಲಿಗೆ ಈಡಾಗಿದ್ದಾರೆ .
ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರೂ ಸೇರಿದಂತೆ ಬಹುತೇಕ ನಾಯಕರಿಗೆ ಒಳಮೀಸಲಾತಿಯ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂಬುದು ಗುಟ್ಟಿನ ವಿಷಯವಲ್ಲ .
ಇತ್ತೀಚಿಗೆ ರಾಜ್ಯದೆಲ್ಲೆಡೆ ಮಾದಿಗ ಮುನ್ನಡೆ ಸಮಾವೇಶಗಳ ಅಭೂತಪೂರ್ವ ಯಶಸ್ಸಿನಿಂದ ಕೆಂಗೆಟ್ಟಿರುವ ಕಾಂಗ್ರೆಸ್ಸು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ಇಂತಹ ನೀಚ ಕೃತ್ಯಕ್ಕೆ ಕೈಹಾಕಿದೆ .ಕಾಂಗ್ರೆಸ್ಸಿನ ಸಚಿವ ಸಂಪುಟದ ನಿರ್ಣಯವನ್ನು ಮಾದಿಗ ಸಮಾಜದ ನಾಯಕರು ಒಕ್ಕೊರಲಿನಿಂದ ಧಿಕ್ಕರಿಸುತ್ತೇವೆ ಮತ್ತು ಖಂಡಿಸುತ್ತೇವೆ ಎಂದಿದ್ದಾರೆ.