ಮಾದಿಗ ದಂಡೋರ ಹೋರಾಟಕ್ಕೆ ಸಂದ ಜಯ

ರಾಯಚೂರು,ಜ.೩- ರಾಯಚೂರು ತಾಲೂಕಿನ ಜಂಬಲದಿನ್ನಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹ್ಮದ್ ಜಹೀರ್ ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಶಿಧರ ಕುರೇರ ಅವರು ಶಿಸ್ತು ಕ್ರಮ ಜರುಗಿಸಿ ಆದೇಶ ಹೊರಡಿಸಿರುವುದು ಮಾದಿಗ ದಂಡೋರ ಹೋರಾಟಕ್ಕೆ ಸಂದ ಜಯ ಎಂದು ತಾಲೂಕಾಧ್ಯಕ್ಷ ದುಳ್ಳಯ್ಯ ಗುಂಜಳ್ಳಿ ಸಂತಸ ವ್ಯಕ್ತಪಡಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಜಂಬಲದಿನ್ನಿ ಗ್ರಾ.ಪಂ.ದಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆದ ಕಾಮಗಾರಿಯಲ್ಲಿ ರೂ.೧,೦೭,೨೫೦ಗಳು ಹಾಗೂ ಕೃಷಿ ಹೊಂಡ ಕಾಮಗಾರಿ ರೂ. ೭೫,೬೦೦ ಗಳು ಮತ್ತು ೧೪-೧೫ ನೇ ಹಣಕಾಸು ಯೋಜನೆಯಡಿ ಭ್ರಷ್ಟಾಚಾರವಾಗಿರುವ ಕುರಿತು ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಿಗೆ ದೊರೆತ ಮಾಹಿತಿಯನ್ವಯ ನಾವು ಹೋರಾಟ ನಡೆಸಿ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಲು ಆಗ್ರಹ ಮಾಡಿದ್ದೆವು.ಈಗ ಭ್ರಷ್ಟಾಚಾರ ನಡೆದಿರುವುದು ರುಜುವಾತಾಗಿರುವುದರಿಂದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತ ತಡೆ ಹಿಡಿಯುವ ಹಾಗೂ ಕೃಷಿ ಹೊಂಡ ನಿರ್ಮಾಣಕ್ಕಾಗಿ ಮಾಡಿರುವ ವೆಚ್ಚ ರೂ. ೭೫,೬೦೦ ಗಳನ್ನು ವಸೂಲಿಸುವ ದಂಡನೆ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದೆಂದು ಜಿ.ಪಂ.ಸಿಇಓ ಆದೇಶಿಸಿರುವುದು ನಮ್ಮ ಜನಪರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು.
ಈ ಸಂದರ್ಭದಲ್ಲಿ ರಂಜಿತ್ ದಂಡೋರ, ಜಕ್ರಪ್ಪ ಹಂಚಿನಾಳ, ಗ್ಯಾರಿಕೇಶ, ರವಿ ದೇವನಪಳ್ಳಿ ಇದ್ದರು.