
ರಾಯಚೂರು,ಸೆ.೭- ದೇವದುರ್ಗ ತಾಲ್ಲೂಕಿನ ಹಿರೇಕೂಡ್ಲಗಿ ಗ್ರಾಮದ ಮಾದಿಗ ಸಮಾಜದ ಕುಟುಂಬದ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಸೆಪ್ಟೆಂಬರ್ ೧೮ ರಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನಾ ಸಮಾವೇಶ ಮಾಡಲಾಗುವುದು ಎಂದು ಬಹುಜನ ಚಿಂತಕ, ಹೋರಾಟಗಾರ ಎಂ.ಆರ್.ಭೇರಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಕಳೆದ ಆಗಸ್ಟ್ ೧ರಂದು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹಿರೇಕೂಡ್ಲಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾದಿಗ ಸಮಾಜದ ತಿಮ್ಮಪ್ಪ ಎಂಬುವವರ ಮೇಲೆ ಪರಿಶಿಷ್ಟ ಜನಾಂಗದ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಇದನ್ನು ಖಂಡಿಸಿ ದೂರು ನೀಡಲು ಮುಂದಾದಾಗ ರಾತ್ರಿ ಗುಂಪು ಕಟ್ಟಿಕೊಂಡು ಕುಟುಂಬ ಸದಸ್ಯರ ಹಾಗೂ ಮಹಿಳೆಯರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಕ್ಕೆ ಹಲ್ಲೆ ಮಾಡಿದವರು ಪ್ರತಿದೂರು ನೀಡಿದ್ದಾರೆ. ಪೊಲೀಸರು ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ ಸ್ಥಳ ಪರಿಶೀಲನೆ ಮಾಡಿ ಸತ್ತಾಸತ್ಯತೆ ಅರಿತು ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ಥರ ಮೇಲೆ ದಾಖಲಿಸಿರುವ ಪ್ರತಿದೂರು ( ಕೌಂಟರ್ ಕೇಸ್) ವಾಪಸ್ ಪಡೆಯಬೇಕು.ದೌರ್ಜನ್ಯ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ಪ್ರತಿ ದೂರು ದಾಖಲು ಮಾಡದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಕ್ತ ನಿರ್ದೇಶನ ನೀಡಬೇಕು. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು. ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಸೆಪ್ಟೆಂಬರ್೧೮ ರೊಳಗೆ ಸಂತ್ರಸ್ಥರ ವಿರುದ್ಧ ದಾಖಲಾದ ಪ್ರಕರಣ ಹಿಂಪಡೆದು ತಪ್ಪಿತಸ್ಥರನ್ನು ಬಂದಿಸದಿದ್ದರೆ ಗಬ್ಬೂರು ಗ್ರಾಮದಿಂದ ಹಿರೇಕೂಡ್ಲಗಿ ಗ್ರಾಮದ ವರೆಗೆ ಪ್ರತಿಭಟನಾ ಸಮಾವೇಶ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಶಿವರಾಯ ಅಕ್ಕರಕಿ, ಮುಖಂಡರಾದಾ ಮಾರೆಪ್ಪ ಮಲದಕಲ್, ರಾಜು ಬೊಮ್ಮನಾಳ, ಎ.ರಾಮು, ಶ್ರೀನಿವಾಸ ಕೊಪ್ಪರ, ರಾಘವೇಂದ್ರ ಬೋರೆಡ್ಡಿ, ಶಾಂತಕುಮಾರ ಹೊನ್ನಟಗಿ ಇದ್ದರು.