ಮಾದಾರ ಚನ್ನಯ್ಯ, ಮಾತಂಗ ಮಹರ್ಷಿ ಜಯಂತಿ ಸರ್ಕಾರದಿಂದ ಆಚರಣೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ಸೆ.21: 12ನೇ ಶತಮಾನದ ಮೊಟ್ಟ ಮೊದಲನೆಯ ದಲಿತ ವಚನಕಾರ ಶಿವಶರಣ ಮಾದಾರ ಚನ್ನಯ್ಯನವರ ಹಾಗೂ ಶ್ರೀ ಮಾತಂಗ ಮಹರ್ಷಿಯವರ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ವಿವಿಧ ಮಹಾ ಪುರುಷರ ಜಯಂತಿಗಳನ್ನು ಸರ್ಕಾರವೇ ಆಚರಿಸಲು ಆದೇಶ ಹೊರಡಿಸಿದೆ. ಆದಾಗ್ಯೂ, ಶಿವಶರಣ ಮಾದಾರ ಚನ್ನಯ್ಯ ಹಾಗೂ ಶ್ರೀ ಮಾತಂಗ ಮಹರ್ಷಿಯವರ ಜಯಂತಿಯನ್ನು ಸರ್ಕಾರವು ಆಚರಿಸದೇ ಮಲತಾಯಿ ಧೋರಣೆ ತಳೆದಿದೆ ಎಂದು ದೂರಿದರು.
ರಾಜ್ಯದಲ್ಲಿ ಸುಮಾರು 63 ಲಕ್ಷದಷ್ಟು ಮಾದಿಗ ಸಮುದಾಯದವರಿದ್ದು, ಅವರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಟೀಕಿಸಿದ ಅವರು, ಕೂಡಲೇ ಮಹಾ ಶರಣರ ಜಯಂತಿಯನ್ನು ಡಿಸೆಂಬರ್ ತಿಂಗಳಲ್ಲಿಯೇ ಆಚರಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಶ್ರೀ ಶಿವಶರಣ ಮಾದಾರ ಚನ್ನಯ್ಯನವರ ಸಾಂಸ್ಕøತಿಕ ಭವನ ನಿರ್ಮಾಣ ಮಾಡುವಂತೆ, ಕರ್ನಾಟಕ ಆದಿಜಾಂಭವ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕವಾಗಿ 500 ಕೋಟಿ ರೂ.ಗಳ ಅನುದಾನ ಹೆಚ್ಚಿಸುವಂತೆ, ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕವಾಗಿ 500 ಕೋಟಿ ರೂ.ಗಳನ್ನು ಹೆಚ್ಚಿಸುವಂತೆ, ಡಾ. ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮದಿಂದ ರಸ್ತೆ ಬದಿಯಲ್ಲಿ ಚರ್ಮ ಕೈಗಾರಿಕೆ ಕುಶಲ ಕರ್ಮಿಗಳಿಗೆ ವಸತಿ ಸೌಲಭ್ಯ ಹಾಗೂ ಸಾಲ ಒದಗಿಸುವಂತೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮನೆಯನ್ನು ನಿರ್ಮಿಸಿಕೊಡಲು ಫಲಾನುಭವಿಗಳಿಂದ ಪಡೆಯಬೇಕಾಗಿರುವ 67,750ರೂ.ಗಳ, ಪರಿಶಿಷ್ಟ ಜಾತಿಯ ಜನಾಂಗದವರಿಗೆ ವಂತಿಗೆ 67,750ರೂ.ಗಳು ಕಡು ಬಡವರಿಗೆ ಹೊರೆಯಾಗಲಿರುವುದರಿಂದ ಅದನ್ನು ಸರ್ಕಾರವೇ ಭರಿಸುವಂತೆ ಅವರು ಆಗ್ರಹಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ಸಿದ್ದಲಿಂಗ್ ಕಟ್ಟಿಮನಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಗರಾಜ್ ಮುದ್ನಾಳ್, ಶಿವಾಜಿ ಎಸ್. ಪಟ್ಟಣ್, ಸೀತಾಬಾಯಿ ಎಸ್. ಜವಳಕರ್, ಗೌತಮಿ ಟಿ. ನಾಯ್ಕ್, ರೇಶ್ಮಾ ಆರ್. ಟಿಳೆ, ಜಯರಾಜ್ ಕಿಣಗಿಕರ್, ಆನಂದ್ ತೆಗನೂರ್, ಶಿವಕುಮಾರ್ ಗೋತಳ್, ಸುದರ್ಶನ್ ಎಸ್. ನಂಬಿ, ಪ್ರದೀಪ್ ಮಾಂಗ್, ಶ್ರೀಕಾಂತ್, ಧರ್ಮಣ್ಣ ಪೂಜಾರಿ, ಸಂಗು ಹಳ್ಳಿ ಮುಂತಾದವರು ಪಾಲ್ಗೊಂಡಿದ್ದರು.