ಮಾದರಿ ವ್ಯಕ್ತಿತ್ವದ ಮಾನಿನಿ

ದಾವಣಗೆರೆ.ನ.೧೩:  ಪ್ರತಿನಿತ್ಯದಂತೆ ಪಾರ್ಕಿನಲ್ಲಿ ವಾಕ್ ಮಾಡುವ ಸಂದರ್ಭದಲ್ಲಿ ಎಂ.ಸಿ.ಸಿ ‘ಬಿ’ ಬ್ಲಾಕ್ ನಲ್ಲಿರುವ ಈಜುಕೊಳದ ಪಾರ್ಕಿನಲ್ಲಿ ಒಂದು ಅಪರೂಪದ ದೃಶ್ಯ ಕಣ್ಣಿಗೆ ಬಿತ್ತು. ಅದೇನೆಂದರೆ ಒಬ್ಬ ಎಂಜಿನಿಯರಿಂಗ್ ಯುವತಿ ಸುಮಾರು ಹತ್ತಾರು ಬಡ ಮಕ್ಕಳನ್ನು ಕೂರಿಸಿಕೊಂಡು ಉಚಿತವಾಗಿ ಪಾಠ ಮಾಡುತ್ತಿದ್ದಳು. ಆಕೆ ಸಹನ. ಕುತೂಹಲದಿಂದ ಅವಳೊಂದಿಗೆ ಮಾತನಾಡಿದಾಗ ಇವಳು ವೆಲ್ಲೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜನಲ್ಲಿ ಮೆರಿಟ್ ಸೀಟ್ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ ಎಂದು ತಿಳಿಯಿತು. ಜೊತೆಗೆ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಗಾಂಧೀಜಿಯ ಆದರ್ಶಗಳನ್ನು ಅಳವಡಿಸಿಕೊಂಡವಳು ಎಂದು ಅರಿವಾಯಿತು. ಈಗ ಕಾಲೇಜುಗಳು ಆನ್ ಲೈನ್‌ಲ್ಲೇ ನಡೆಯುತ್ತಿರುವುದರಿಂದ ಅದರಲ್ಲೇ ಬಿಡುವು ಮಾಡಿಕೊಂಡು ಈ ಮಕ್ಕಳಿಗೆ ಪಾಠ, ನೀತಿ, ಜೀವನ ಮೌಲ್ಯಗಳನ್ನು ಧಾರೆ ಎರೆಯುತ್ತಿದ್ದಾಳೆ. ಅವಳು ಸುಮಾರು ನಾಲ್ಕೈದು ತಿಂಗಳಿಂದ ಈ ರೀತಿ ಪಾಠ ಮಾಡುತ್ತಿರುವುದು ಮತ್ತು ಇದನ್ನು ಗಮನಿಸಿದ ಸಾರ್ವಜನಿಕರು ಆ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಮಗ್ಗಿಪುಸ್ತಕಗಳು ಮುಂತಾದವುಗಳನ್ನು ಅಲ್ಲಿಗೆ ತಂದು ದಾನ ಮಾಡುತ್ತಿರುವುದು ಸಹ ಕೇಳಿಬಂತು. ಜೊತೆಗೆ ಕರುಣಾ ಟ್ರಸ್ಟಿನ ವತಿಯಿಂದ ಈ ಮಕ್ಕಳ ಕಷ್ಟಕ್ಕೆ ಸ್ಪಂದಿಸಲು ನಿರ್ಧರಿಸಲಾಯಿತು. ಇವಳ ಬಡವರ ಬಗೆಗಿನ ಕಾಳಜಿಯ ಕಾರ್ಯವನ್ನು ನೋಡಿ ಹೃದಯ ತುಂಬಿ ಬಂತು. ಈಕೆ ಕರುಣಾಮಯಿ, ಸಮಾಜಮುಖಿ, ಜೀವಪರದ ವ್ಯಕ್ತಿ ಎನಿಸಿತು. ಇವಳ ಭವಿಷ್ಯ ಉಜ್ವಲವಾಗಲಿ, ಇಂತವರ ಸಂತತಿ ಸಾವಿರ ಸಾವಿರವಾಗಲಿ.ಸ್ವಲ್ಪವೂ ಬಿಡುವಿಲ್ಲದೆ ಹಣಗಳಿಸಬೇಕು ಎಂದು ಭೋಗಕ್ಕಾಗಿ ವೇಗದಲ್ಲಿ ಮುನ್ನುಗ್ಗುತ್ತಿರುವ ಪ್ರಸ್ತುತ ಪ್ರಪಂಚದಲ್ಲಿ ತಾನು ಕಲಿತಿರುವ ವಿದ್ಯೆಯನ್ನು ಇನ್ನೊಬ್ಬರಿಗೆ ಹಂಚುವ ಈ ಹುಡುಗಿಯ ತ್ಯಾಗದ ಮಹಾತ್ಕಾರ್ಯ ಶ್ಲಾಘನೀಯ ಎನಿಸಿತು. ಇಂತಹ ಕಾರ್ಯ ಪ್ರತಿಯೊಬ್ಬ ವಿದ್ಯಾವಂತರೂ ಮಾಡುತ್ತಾ ಬಂದರೆ ಬಡವರಿಗೆ ತುಂಬಾ ಸಹಕಾರಿಯಾಗುತ್ತದೆ. ಇಂತಹ ಅನೇಕ ಬಡ ಮಕ್ಕಳು ಎಲ್ಲರ ಮನೆಯ ಸುತ್ತಮುತ್ತವಿರುತ್ತಾರೆ. ಉದಾಹರಣೆಗೆ ತಮ್ಮ ಮನೆಯ ಕೆಲಸದವರ ಮಕ್ಕಳನ್ನೇ ಕೂರಿಸಿಕೊಂಡು ಪಾಠ ಮಾಡಿದರೆ ಆ ಮಕ್ಕಳ ಭವ್ಯ ಭವಿಷ್ಯ ನಿರ್ಮಾಣವಾಗುತ್ತದೆ. ದಯವಿಟ್ಟು ಪ್ರತಿಯೊಬ್ಬ ಇಂತಹ ವಿದ್ಯಾವಂತರು ತಮ್ಮ ಸುತ್ತಮುತ್ತಲಿನ ಮನೆಯ ಬಡ ಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಸತ್ಕಾರ್ಯವನ್ನು ಮಾಡಬೇಕೆಂಬುದು ನಮ್ಮ ಆಶಯ. 

– ಶಿವನಕೆರೆ ಬಸವಲಿಂಗಪ್ಪ- ಕರುಣಾ ಜೀವ ಕಲ್ಯಾಣ ಟ್ರಸ್ಟ್ (ರಿ) ದಾವಣಗೆರೆ.