
ಬೀದರ:ಮಾ.24:ಕರ್ನಾಟಕ ಸರ್ಕಾರ ಹಾಗೂ ಈ ಭಾಗದ ನಾಗರಿಕರ ನಿರೀಕ್ಷೆಯಂತೆ ನೂತನವಾಗಿ ಆರಂಭವಾಗಿರುವ ಬೀದರ ವಿಶ್ವವಿದ್ಯಾಲಯವನ್ನು ಒಂದು ಮಾದರಿ ವಿಶ್ವವಿದ್ಯಾಲಯವನ್ನಾಗಿ ನಿರ್ಮಾಣ ಮಾಡಲು ಶ್ರಮಿಸುವೆ ಎಂದು ಬೀದರ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪ್ರೊ.ಬಿ.ಎಸ್.ಬಿರಾದಾರರವರು ಹೇಳಿದರು. ಅವರು ಇಂದು ಬೀದರ ಹುಮನಾಬಾದ ಮುಖ್ಯರಸ್ತೆಯಲ್ಲಿರುವ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿಯಲ್ಲಿ ಬೀದರ ವಿಶ್ವವಿದ್ಯಾಲಯದ ನೂತನ ಕುಲಪತಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಅವರು ಮಾತನಾಡುತ್ತಾ ಬಹುದಿನಗಳ ಈ ಭಾಗದ ಕನಸಾದ ಬೀದರ ಸ್ವತಂತ್ರ ವಿಶ್ವವಿದ್ಯಾಲಯದ ಕನಸು ಸಾಕಾರಗೊಂಡಿದೆ. ಕೆಲಸ ಮಾಡಲು ಮುಖ್ಯವಾಗಿ ಮನಸ್ಸು ಬೇಕು. ಆ ದಿಸೆಯಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ. ಸರ್ವರ ಬಿಚ್ಚುಮನಸ್ಸಿನ ಸಹಕಾರದ ಅವಶ್ಯಕತೆಯಿದೆ. ನಿಮ್ಮೆಲ್ಲರ ಸಹಕಾರವಿದ್ದರೆ ಈ ನೂತನ ಏಳು ವಿಶ್ವವಿದ್ಯಾಲಯಗಳಲ್ಲಿಯೇ ಬೀದರ ವಿಶ್ವವಿದ್ಯಾಲಯ ಒಂದು ಮಾದರಿ ವಿಶ್ವವಿದ್ಯಾಲಯ ಮಾಡಲು ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಬಿ.ಕಣ್ಣಪ್ಪರವರು ಮಾತನಾಡುತ್ತ ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ಕರ್ತವ್ಯನಿಷ್ಠೆಯಿಂದ ಹೆಸರುವಾಸಿಯಾಗಿರುವ ಪ್ರೊ.ಬಿ.ಎಸ್.ಬಿರಾದಾರರವರು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವುದು ಈ ಭಾಗದ ಭಾಗ್ಯವಾಗಿದೆ ಎಂದರು. ಇನ್ನೋರ್ವ ಅತಿಥಿಗಳು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಕೆ.ಎಸ್.ಮಾಲಿಪಾಟೀಲರವರು ಮಾತನಾಡುತ್ತಾ ಸರಳ ಸಜ್ಜನಿಕೆಯ ವ್ಯಕ್ತಿ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡದ್ದು ಸಂತೋಷದ ಸಂಗತಿ. ಅತ್ಯಂತ ಸವಾಲಿನ ಜೀವನವನ್ನು ನಿರ್ವಹಿಸಿ ಇಂದು ಕುಲಪತಿಯ ಹುದ್ದೆಯವರೆಗೆ ಸಾಧಿಸಿದ್ದು ಪ್ರೊ.ಬಿ.ಎಸ್.ಬಿರಾದಾರ ಸಾಧನೆಯಾಗಿದೆ ಎಂದರು. ಇನ್ನೋರ್ವ ಅತಿಥಿಗಳು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಬೀದರನ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಶಿವಕುಮಾರ ವಿ.ಉಪ್ಪೆಯವರು ಮಾತನಾಡುತ್ತಾ ಪ್ರೊ.ಬಿ.ಎಸ್.ಬಿರಾದಾರರವರು ವಿಶ್ವವಿದ್ಯಾಲಯದ ಜವಾಬ್ದಾರಿಯನ್ನು ಹೊರಲು ಸಮರ್ಥರಾಗಿದ್ದಾರೆ. ಅವರ ನೇತೃತ್ವದಲ್ಲಿ ನೂತನ ವಿಶ್ವವಿದ್ಯಾಲಯ ಪ್ರಗತಿ ಹೊಂದಲಿದೆ ಎಂದರು. ಇನ್ನೋರ್ವ ಅತಿಥಿಗಳು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಗ್ರಂಥಪಾಲಕರಾದ ಡಾ.ಗಣಪತಿ ಸಿಂಧೆಯವರು ಮಾತನಾಡುತ್ತ ನನ್ನ ಸಹಪಾಠಿಯೊಬ್ಬರು ಶರಣರ ನೆಲ ಬೀದರ ವಿಶ್ವವಿದ್ಯಾಲಯವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗುತ್ತಾರೆಂದರು. ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ.ವಿ.ಟಿ.ಕಾಂಬಳೆಯವರು ಮಾತನಾಡುತ್ತ ಸರಳ ಜೀವನ ಉನ್ನತ ವಿಚಾರದ ವ್ಯಕ್ತಿ ಬೀದರ ವಿಶ್ವವಿದ್ಯಾಲಯವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾರೆ ಅದರಲ್ಲಿ ಯಾವುದೇ ಅನುಮಾನವಿಲ್ಲವೆಂದರು. ಇನ್ನೋರ್ವ ಅತಿಥಿಗಳು ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕರಾದ ಡಾ.ಸುರೇಶ ಜಂಗೆಯವರು ಮಾತನಾಡುತ್ತಾ ಕಲ್ಯಾಣ ಕರ್ನಾಟಕ ಭಾಗದ ವ್ಯಕ್ತಿಯೊಬ್ಬರು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರದ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ ವಿ.ಗಬಾಡಿಯವರು ಮಾತನಾಡುತ್ತಾ ಬಹುದಿನಗಳ ಕನಸು ಇಂದು ಸಾಕಾರಗೊಂಡಿದೆ ಇನ್ನು ಈ ಪ್ರದೇಶವು ಅಭಿವೃದ್ಧಿಯಾಗಲಿದೆ. 26 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಈ ಕೇಂದ್ರಕ್ಕೆ ವಿಶೇಷ ಸ್ಥಾನವಿದೆ. ವಿಶಾಲವಾದ 320 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೇಂದ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳ ಜ್ಞಾನವನ್ನು ತಣಿಸಿದೆ. ನೂತನ ವಿಶ್ವವಿದ್ಯಾಲಯದಿಂದಾಗಿ ಈ ಭಾಗದ ವಿದ್ಯಾರ್ಥಿಗಳ ಬಾಳು ಬೆಳಗಲು ಸಾಕಾರವಾಗುತ್ತದೆ. ಪ್ರತಿಶತ 70ರಷ್ಟು ವಿದ್ಯಾರ್ಥಿನಿಯರಿಂದ ಕೂಡಿದ ಈ ಕೇಂದ್ರ ವಿಶ್ವವಿದ್ಯಾಲಯವಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮವು ಕು.ಸತ್ಯಶೀಲಾರವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಡಾ.ರಾಮಚಂದ್ರ ಗಣಾಪೂರ ಸರ್ವರನ್ನು ಸ್ವಾಗತಿಸಿದರು, ಡಾ.ಶಿವಕುಮಾರ ಸಂಗನ್ ವಂದಿಸಿದರು, ವಾಣಿಜ್ಯ ವಿಭಾಗದ ಅಧ್ಯಾಪಕರಾದ ಡಾ.ಅಂಬರೀಶ ವೀರನಾಯಕ ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೀದರನ ವಿವಿಧ ಕಾಲೇಜಿನ ಮುಖ್ಯಸ್ಥರು, ಕುಲಪತಿಗಳ ಕುಟುಂಬವರ್ಗದವರು, ಅವರ ಸಹಪಾಠಿಗಳು ಹಾಗೂ ಕೇಂದ್ರದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು.