ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಸಂಪುಟ ಅಸ್ತು

ನವದೆಹಲಿ, ಜೂ.3-ಮಾದರಿ ಬಾಡಿಗೆ (ಮಾಡೆಲ್ ಟೆನೆನ್ಸಿ ಆ್ಯಕ್ಟ್) ಕಾಯ್ದೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಹೊಸ ಶಾಸನಗಳನ್ನು ಜಾರಿಗೆ ತರುವ ಮೂಲಕ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಬಾಡಿಗೆ ಕಾನೂನುಗಳಲ್ಲಿ ಅಗತ್ಯ ತಿದ್ದುಪಡಿ ಮಾಡುವ ಮೂಲಕ, ಈ ಕಾಯ್ದೆಯನ್ನು ಅಳವಡಿಸಿಕೊಳ್ಳಲು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ.
ಸರಕಾರ 2019ರಲ್ಲಿ ಮೊದಲ ಬಾರಿಗೆ ಈ ಕಾಯ್ದೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿತ್ತು. ಬಾಡಿಗೆದಾರರು ಮತ್ತು ಭೂಮಾಲಿಕರ ನಡುವಿನ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿವರಿಸುವ ಮೂಲಕ ಅವರ ಮಧ್ಯೆ ಇರುವ ವಿಶ್ವಾಸದ ಕೊರತೆಯನ್ನು ನಿವಾರಿಸುವ ಗುರಿಯನ್ನು ಕಾಯ್ದೆ ಹೊಂದಿದೆ.
ಕೇಂದ್ರ ಸರಕಾರವು ತನ್ನ ಪ್ರಕಟಣೆಯಲ್ಲಿ, ಮಾದರಿ ಬಾಡಿಗೆ ಕಾಯ್ದೆಯಿಂದ ಬಾಡಿಗೆ ವಸತಿ ಉದ್ದೇಶಕ್ಕಾಗಿ ಖಾಲಿ ಇರುವ ಮನೆಗಳನ್ನು ಅನ್ಲಾಕ್ ಮಾಡಲು ಈ ಕಾಯಿದೆಯು ಸಹಕಾರಿಯಾಗಲಿದೆ ಎಂದು ತಿಳಿಸಿದೆ. ವಸತಿಗೆ ಸಂಬಂಧಪಟ್ಟ ಭಾರೀ ಕೊರತೆಗಳನ್ನು ನಿವಾರಿಸಲು, ಬಾಡಿಗೆ ವಸತಿಗಳಲ್ಲಿ ಖಾಸಗಿಯವರ ಭಾಗವಹಿಸುವಿಕೆಗೆ ಉತ್ತೇಜನ ನೀಡಿ, ಅದನ್ನು ಒಂದು ವ್ಯಾಪಾರ ಮಾದರಿಯನ್ನಾಗಿಸುವಲ್ಲಿ ಈ ಕಾಯಿದೆ ಉಪಯೋಗಕ್ಕೆ ಬರುತ್ತದೆ ಎನ್ನಲಾಗಿದೆ.