ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.03: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಎಂದ ತಕ್ಷಣ ನೆನಪಿಗೆ ಬರುವುದು ಶ್ರೀ ಕ್ಷೇತ್ರ ಕೊಟ್ಟೂರೇಶ್ವರ ಸ್ವಾಮಿ ನೆಲೆಸಿದ ಕೊಟ್ಟೂರು. ಈ ಕೊಟ್ಟೂರು ತಾಲೂಕಾಗಿ ಏಳು ವರ್ಷಗಳು ಕಳೆದರೂ ಸಹ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ. ಈ ಅಭಿವೃದ್ಧಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಗೆದ್ದಿರುವ ಶಾಸಕರಾಗಿರುವ ನೇಮಿರಾಜ್ ನಾಯಕ್ ಕೊಟ್ಟೂರನ್ನು ಮಾದರಿ ತಾಲೂಕನ್ನಾಗಿಸುವವರೇ ಎಂಬ ನೀರೀಕ್ಷೆಯಲ್ಲಿ ಕೊಟ್ಟೂರಿನ ಜನತೆ ಇದ್ದಾರೆ.
ಎರಡು ತಾಲೂಕು ಒಂದೇ ಕ್ಷೇತ್ರ:
ಮೊದಲು ಕೊಟ್ಟೂರು ಕ್ಷೇತ್ರವಾಗಿತ್ತು, ನಂತರ ದಿನಗಳಲ್ಲಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರವಾಗಿ ಮಾರ್ಪಡಗೊಂಡಿತ್ತು. ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳು ಸೇರಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕೊಟ್ಟೂರು ತಾಲೂಕು ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ
ತಾಲೂಕು ಮಟ್ಟದ ಕಟ್ಟಡಗಳು:
ಕೊಟ್ಟೂರು ತಾಲೂಕಾಗಿ ಸುಮಾರು ಆರು ವರ್ಷ ಕಳೆದರೂ ಸಹ ತಾಲೂಕು ಆಡಳಿತ ಹೊರತುಪಡಿಸಿ ಸಬ್ ರಿಜಿಸ್ಟರ್ ಆಗಲಿ ಯಾವುದೇ ತಾಲೂಕು ಮಟ್ಟದ ಕಟ್ಟಡಗಳು ನಿರ್ಮಾಣಗೊಂಡಿಲ್ಲ. ಒಬ್ಬ ರೈತನು ರಿಜಿಸ್ಟ್ರೇಷನ್ ಗೆ ದೂರದ ಕೂಡ್ಲಿಗಿಯ ಸಬ್ ರಿಜಿಸ್ಟ್ರೇಷನ್ ಕಚೇರಿಗೆ ತೆರಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಈ ಅಲೆದಾಡುವ ಪರಿಸ್ಥಿತಿಗೆ ನಾಂದಿ ಯಾವಾಗ ಎಂಬುವುದು ಜನರಲ್ಲಿ ಮನೆ ಮಾಡಿದೆ.
ಬಸ್ ನಿಲ್ದಾಣ ಅಭಿವೃದ್ಧಿ:
ಮಳೆರಾಯ ಧರೆಗಿಳಿದರೆ ಸಾಕು ರೈತರಲ್ಲಿ ನಗುಮುಖ ತೋರುವುದು ಸಹಜ, ಆದರೆ ಮಳೆರಾಯನ ಕೊಟ್ಟೂರು ಪಟ್ಟಣದಲ್ಲಿ ಆರ್ಭಟ ಮಾಡಿದರೆ ಸಾಕು ಚರಂಡಿಯಲ್ಲಿ ನೀರು ತುಂಬಿ ಬಸ್ ನಿಲ್ದಾಣಕ್ಕೆ ಹೊಕ್ಕಿ ಬಸ್ ನಿಲ್ದಾಣ ಕೆಸರು ಗದ್ದೆಯಂತೆ ಆಗುತ್ತದೆ ಇದರಿಂದಾಗಿ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಪರದಾಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಇವನ್ನೆಲ್ಲ ಮನಗಂಡು ವರ್ಷದ ಹಿಂದೆ ಕಲ್ಯಾಣ ಕರ್ನಾಟಕ ಸಾರಿಗೆ ರಸ್ತೆ ನಿಗಮದ ವ್ಯವಸ್ಥಾಪಕರಾದ ರಾಚಪ್ಪ, ಮಾಜಿ ಶಾಸಕ ಭೀಮ ನಾಯಕ್, ಅಂದಿನ ಜಿಲ್ಲಾಧಿಕಾರಿಗಳಾದ ಅನಿರುದ್ಧ ಶ್ರವಣ ನೀಡಿ ಈ ನಿಲ್ದಾಣವನ್ನು ತೆರವುಗೊಳಿಸಿ ಸ್ವಲ್ಪಮಟ್ಟಿಗೆ ಎತ್ತರ ಮಾಡಿ ಎರಡು ಕೋಟಿ ಹಣದ ವೆಚ್ಚದಲ್ಲಿ ನಿಲ್ದಾಣವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದರು ಅಂದಿನಿಂದ ಇಂದಿನವರೆಗೆ ಯಾವುದೇ ಕೆಲಸ ಆಗಿಲ್ಲ. ಈ ಕಾರ್ಯ ಯಾವ ಹಂತದಲ್ಲಿದೆ ಎಂಬುವುದನ್ನು ತಿಳಿದು ಕಾರ್ಯ ರೂಪಕ್ಕೆ ತರುವುದು ಶಾಸಕರು ಮುಂದೆ ಇದೆ.
ಆಸ್ಪತ್ರೆಯ ಅಭಿವೃದ್ಧಿ:
ಈ ಆಸ್ಪತ್ರೆಯಲ್ಲಿ ಅನೇಕ ಕೊರತೆಗಳಿದ್ದು, ತಾಲೂಕು ಮಟ್ಟದ ಆಸ್ಪತ್ರೆಯಾಗಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಅಂದಿನ ಜಿಲ್ಲಾಧಿಕಾರಿಗಳಾದ ಅನಿರುದ್ಧ ಶ್ರವಣ ಭೇಟಿಯನ್ನು ನೀಡಿದ್ದರು. ಅಲ್ಲಿನಿಂದ ಇಲ್ಲಿಯವರೆಗೆ ಈ ಆಸ್ಪತ್ರೆಯ ನಿರ್ಮಾಣ ಯಾವ ಹಂತದಲ್ಲಿದೆ ಎಂಬುವುದನ್ನು ಜನರಿಗೆ ತಿಳಿಯದಾಗಿದೆ. ಈ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಶಾಸಕರು ಶ್ರಮ ವಹಿಸಬೇಕಾಗಿದೆ.
ಪದವಿ ಕಾಲೇಜ್ ನಿರ್ಮಾಣ:
ಬಡವರ ವಿದ್ಯಾಕಾಶಿಯಾಗಿ ಕೊಟ್ಟೂರು ಪಟ್ಟಣ ನಿರ್ಮಾಣವಾಗಬೇಕಾದರೆ ಇಲ್ಲಿನ ಸರ್ಕಾರಿ ಪದವಿ ಕಾಲೇಜು ಮುಖ್ಯ. ಅನೇಕ ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳ ಬೇಡಿಕೆ ಪದವಿ ಕಾಲೇಜುಗಳಿಗೆ ನಿರ್ಮಾಣ ಮಾಡಬೇಕು ಎಂಬುದಾಗಿದೆ. ಪದವಿ ಕಾಲೇಜ್ ನಿರ್ಮಾಣಕ್ಕೆ ಅನೇಕ ಬಾರಿ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದರೂ ಸಹ ಅನೇಕ ವರ್ಷಗಳಾದರೂ ಕಟ್ಟಡ ನಿರ್ಮಾಣವಾಗಿಲ್ಲ.
ಕೆರೆಗೆ ನೀರು ತುಂಬಿಸುವ ಯೋಜನೆ:
ಕೊಟ್ಟೂರು ಕೆರೆ ತಾಲೂಕಿನಲ್ಲಿ ಅತಿ ದೊಡ್ಡ ಕೆರೆಯಾಗಿದ್ದು ಈ ಕೆರೆಗಾಗಿ 380 ಅನುದಾನವನ್ನು ಬಿಡುಗಡೆ ಮಾಡಿದ್ದು, ಮಾಜಿ ಶಾಸಕರಾದ ಭೀಮ ನಾಯಕ್ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ವಿಧಾನಸೌಧದಲ್ಲಿ ಸಹ ಧ್ವನಿ ಎತ್ತಿದ್ದರು. ಆದರೂ ಕೆರೆಗಳಿಗೆ ತುಂಬಿಸುವಲ್ಲಿ ವಿಫಲವಾಗಿದೆ.
24*7 ಯೋಜನೆ:
ಕೊಟ್ಟೂರಿನ ಜನತೆಗೆ ವಾರಕ್ಕೆ ಒಂದು ಬಾರಿ ನೀರು ಪೂರೈಕೆ ಆಗುತ್ತಿದ್ದು, ತುಂಗಾ ಭದ್ರದ ಜೀವನಾಡಿ 24*7 ಯೋಜನೆಯ ನಾಲ್ಕು ವರ್ಷ ಕಳೆದರೂ ಸಹ ಆಮೆ ಗತಿಯಿಂದ ಸಾಗಿ ಪಟ್ಟಣದ ತುಂಬೆಲ್ಲ ಎಲ್ಲೆಂದರಲ್ಲಿ ರಸ್ತೆ ಆಗೆದಿದ್ದ ಗುಂಡಿಗಳು ಬಿದ್ದಿವೆ. ಇದರಿಂದ ಸವಾರರು ಪ್ರತಿನಿತ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಜನರು ಸಮರ್ಪಕವಾಗಿ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ.
ಈ ಎಲ್ಲಾ ಸವಾಲುಗಳನ್ನು ಶಾಸಕರಾದ ನೇಮಿರಾಜ್ ನಾಯಕ್ ಸ್ವೀಕರಿಸಿ ಅದಷ್ಟು ಬೇಗ ಅಭಿವೃದ್ಧಿಗೆ ಮುಂದಾಗಬೇಕಿದೆ.