ಮಾದರಿ ನೀತಿ ಸಂಹಿತೆ ಪಾಲನೆಗೆ ಸೂಚನೆ

ಚಿತ್ರದುರ್ಗ.ಏ.೬; ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆ ಮಾಡಬೇಕು. ಮತದಾರರಿಗೆ ಯಾವುದೇ ರೀತಿಯ ಆಮಿಷಗಳನ್ನು ಒಡ್ಡುವಂತಿಲ್ಲ. ಹಣ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ವಿತರಿಸುವಂತಿಲ್ಲ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘಿಸಿದರೆ ಐಪಿಸಿ ಕಲಂ 188 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಆಗಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.ನಗರದ ಚಿತ್ರದುರ್ಗ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ  ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ರಾಜಕೀಯ ಪಕ್ಷಗಳು ತಮ್ಮ ವಕ್ತಾರರು ಸೇರಿದಂತೆ ಯಾರಿಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕು ಎಂಬ ಬಗ್ಗೆ ಹಾಗೂ ಸಭೆಗಳಿಗೆ ಯಾರನ್ನು ಕರೆಯಬೇಕು ಎಂಬುವುದರ ಬಗ್ಗೆ ಅಧಿಕೃತವಾಗಿ ಪತ್ರದ ಮೂಲಕ ತಿಳಿಸಬೇಕು. ಚುನಾವಣಾಧಿಕಾರಿಗಳ ಕಚೇರಿಗೆ ತಮ್ಮ ಪ್ರತಿನಿಧಿಗಳ ವಿಳಾಸ, ವಿವರಗಳನ್ನು ನೀಡಬೇಕು ಎಂದರು.ರಾಜಕೀಯ ಪಕ್ಷಗಳು ನಡೆಸುವ ಸಭೆ, ಸಮಾರಂಭಗಳಿಗೆ ಅನುಮತಿ ಪಡೆಯಲು 48 ಗಂಟೆಗಳ ಮುಂಚಿತವಾಗಿ ಸುವಿಧಾ ತಂತ್ರಂಶದ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ತುರ್ತಾಗಿ ಅನುಮತಿ ನೀಡುವುದು ಕಷ್ಟ ಸಾಧ್ಯ. ರಾಜಕೀಯ ಪಕ್ಷಗಳು ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದ ಒಳಿತು ಎಂದರು.ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ನೀಡಲು, ಧ್ವನಿವರ್ಧಕ ಬಳಸಲು ಅನುಮತಿ ಪಡೆದುಕೊಳ್ಳಬೇಕು. ಪ್ರಚಾರ ಸಾಮಗ್ರಿಗಳಾದ ಕರಪತ್ರ, ಪೋಸ್ಟರ್, ಬ್ಯಾನರ್ಸ್ ಮುದ್ರಣದ ಬಗ್ಗೆ ಸರಿಯಾದ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆಯದೇ ಪ್ರಚಾರ ಸಾಮಾಗ್ರಿ ಮುದ್ರಿಸುವಂತಿಲ್ಲ ಎಂದು ತಿಳಿಸಿದರು.