ಮಾದರಿ ನೀತಿ ಸಂಹಿತೆ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಿ

ಗದಗ, ಮಾ.16: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಜಿಲ್ಲೆಯಲ್ಲಿ ನ್ಯಾಯಯುತ ಮತ್ತು ಶಾಂತಿಯುತವಾಗಿ ಜರುಗಿಸಲು ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ರ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆಯನ್ನು ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವ ಸಂಬಂಧ ಅಕ್ರಮ ಮಧ್ಯ ತಯಾರಿಕೆ, ಶೇಖರಣೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದರು. ಹೊರ ರಾಜ್ಯಗಳಿಂದ ಮಧ್ಯ ಸರಬರಾಜು ಆಗದಂತೆ ನಿಗಾವಹಿಸಬೇಕು. ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಸರಕುಗಳು ಅಕ್ರಮ ಸಾಗಾಣಿಕೆಯಾಗದಂತೆ ನೋಡಿಕೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತಾಗಲು ಸೂಚಿಸಿದರು.
ದಾಖಲೆಗಳಿಲ್ಲದೇ ಸಾಗಾಣಿಕೆ ಮಾಡುವ ಹಣವನ್ನು ವಶಕ್ಕೆ ಪಡೆದು ಕೂಡಲೆ ದೂರು ದಾಖಲಿಸಬೇಕು. ಅಲ್ಲದೇ ಸಂಬಂಧಿಸಿದ ಅಧಿಕಾರಿಗಳು ತಮಗೆ ನೀಡಲಾದ ನಮೂನೆಗಳಲ್ಲಿ ಅಗತ್ಯದ ವರದಿಯನ್ನು ನಿಗದಿತ ಕಾಲಮಿತಿಯೊಳಗೆ ಸಲ್ಲಿಸಲು ತಿಳಿಸಿದರು. ಜಿಲ್ಲೆಯಲ್ಲಿ ಕಡಿಮೆ ಮತದಾನವಾದಂತಹ ಮತಗಟ್ಟೆಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಂತಹ ಅಧಿಕಾರಿ ಸಿಬ್ಬಂದಿಗಳು ತಮಗೆ ವಹಿಸಲಾದ ಕರ್ತವ್ಯಗಳನ್ನು ಲೋಪಗಳಿಗೆ ಆಸ್ಪದೇ ನೀಡದೆ ಎಲ್ಲ ಅಧಿಕಾರಿಗಳು ಸಮನ್ವಯದೊಂದಿಗೆ ನಿರ್ವಹಿಸಬೆಕು. ಚುನಾವಣಾ ಕರ್ತವ್ಯದಲ್ಲಿ ಯಾವುದೇ ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಎಚ್ಚರಿಕೆ ನೀಡಿದರು.
ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ ಮಾತನಾಡಿ ಚುನಾವಣೆ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಕಾರ್ಯನಿರ್ವಹಿಸಬೇಕು. ಚುನಾವಣೆ ಘೋಷಣೆ ನಂತರ ಎಲ್ಲ ಅಧಿಕಾರಿ ಸಿಬ್ಬಂದಿಗಳು ಚುನಾವಣಾ ಆಯೋಗದೊಂದಿಗೆ ಕಾರ್ಯನಿರ್ವಹಿಸಬೇಕಾಗಿದ್ದು ಆಯೋಗದಿಂದ ಸೂಚಿಸಲಾಗುವ ಕರ್ತವ್ಯಗಳನ್ನು ಚಾಚು ತಪ್ಪದೇ ಪಾಲಿಸಬೇಕಾಗುತ್ತದೆ. ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು ಎಂದರು.
ಜಿಲ್ಲೆಯಿಂದ ವಲಸೆ ಹೊದಂತಹ ಮತದಾರರ ಹಾಗೂ ಕುಟುಂಬದ ಮಾಹಿತಿಯನ್ನು ಕಲೆ ಹಾಕಿ ಅಂತಹವರನ್ನು ಮತದಾನದ ದಿನದಂದು ಕರೆತರಲು ಪ್ರೇರೆಪಿಸಲು ಅಗತ್ಯದ ಕ್ರಮ ಕೈಗೊಳ್ಳಬೇಕು. ಇದೊಂದು ಸವಾಲಿನ ಕಾರ್ಯವಾಗಿದ್ದು ಈ ಸವಾಲನ್ನು ಒಂದು ತಂಡವಾಗಿ ನಿರ್ವಹಿಸುವದರ ಮೂಲಕ ಯಶಸ್ವಿಗೊಳಿಸಲು ತಿಳಿಸಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ. ಮಾತನಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.