
ಗದಗ, ಮಾ 30: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ರ ಹಿನ್ನೆಲೆಯಲ್ಲಿ ಮಾರ್ಚ 29 ರಿಂದ ಮೇ 15 ರವರೆಗೆ ಜಿಲ್ಲೆಯಾದ್ಯಂತ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಈ ವೇಳೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023ರ ನಿಮಿತ್ತ ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಪ್ರಚುರಪಡಿಸಿದ ವಿವಿಧ ಯೋಜನೆಗಳ, ನಾಯಕರುಗಳ ಪೆÇೀಸ್ಟರ್ಸ, ಬ್ಯಾನರ್, ಕಟೌಟ್‍ಗಳನ್ನು ತಕ್ಷಣ ತೆರವುಗೊಳಿಸಬೇಕು. ಜನಪ್ರತಿನಿಧಿಗಳಿಗೆ ನೀಡಲಾದ ಸರಕಾರಿ ವಾಹನಗಳನ್ನು ಹಿಂಪಡೆಯಬೇಕು. ವಿವಿಧ ರಾಜಕೀಯ ಪಕ್ಷಗಳು ನಡೆಸುವ ಸಭೆ ಸಮಾರಂಭಗಳಿಗೆ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದೇ ಕಾರ್ಯಕ್ರಮ ನಡೆದಲ್ಲಿ ನಿಯಮಾನುಸಾರ ಕ್ರಮ ವಹಿಸುವಂತೆ ತಿಳಿಸಿದರು.
ಸರ್ಕಾರಿ ಕಚೇರಿಗಳ ಸುತ್ತಮುತ್ತಲೂ ಪ್ರದರ್ಶಿಸಿದ ಬ್ಯಾನರ್ , ಕಟೌಟ್ , ಫಲಕಗಳನ್ನು ತೆರವುಗೊಳಿಸಬೇಕು. ತೆರವುಗೊಳಿಸಿದ ಜಾಗದಲ್ಲಿ ಮತದಾನ ಮಹತ್ವ ಸಾರುವ ಬಿತ್ತಿಪತ್ರಗಳನ್ನು ಲಗತ್ತಿಸಬೇಕೆಂದು ಹೇಳಿದರು. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಇಲಾಖೆಯಿಂದ ಜಾಹೀರಾತುಗಳನ್ನು ಬಿಡುಗಡೆ ಮಾಡುವಂತಿಲ್ಲ. ಕುಡಿಯುವ ನೀರು ಹಾಗೂ ತುರ್ತು ಕಾಮಗಾರಿಗಳ ಟೆಂಡರ್ಗಳನ್ನು ಪ್ರಸ್ತಾವನೆ ಕಳುಹಿಸಿ ನಂತರ ಕ್ರಮ ಕೈಗೊಳ್ಳಬೇಕಾಗುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ಚುನಾವಣಾ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಿ ಸಲಹೆ ಪಡೆಯಬಹುದಾಗಿದೆ. ಚೆಕ್ ಪೆÇೀಸ್ಟ್‍ನಲ್ಲಿ ಬರುವ ವಾಹನಗಳ ತಪಾಸಣೆ ಕಾರ್ಯ ಶಿಸ್ತುಬದ್ಧವಾಗಿ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಒಟ್ಟಾರೆಯಾಗಿ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನಿಗಾ ವಹಿಸಲು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಅಧಿಸೂಚನೆ ಎಪ್ರಿಲ್ 13 ರಂದು ಪ್ರಕಟಿಸಲಾಗುವುದು. ಎಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಎಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದೆ ಪಡೆಯಲು ಎಪ್ರಿಲ್ 24 ಕೊನೆಯ ದಿನವಾಗಿದೆ. ಮತದಾನವು ಮೇ 10 ರಂದು ಜರುಗಲಿದ್ದು, ಮತ ಎಣಿಕೆಯು ಮೇ 13 ರಂದು ಜರುಗಲಿದೆ. ಚುನಾವಣಾ ಪ್ರಕ್ರಿಯೆಯು ಮೇ 15 ಕ್ಕೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ ಅವರು ಮಾತನಾಡಿ ನರೇಗಾ ಹೊರತುಪಡಿಸಿ ಯಾವುದೇ ಕಾಮಗಾರಿಗಳ ಟೆಂಡರ್ಗಳನ್ನು ಆಹ್ವಾನಿಸುವಂತಿಲ್ಲ. ಇಲಾಖಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಚುನಾವಣಾ ಕರ್ತವ್ಯ ಸಮರ್ಪಕವಾಗಿ ನಿಭಾಯಿಸಬೇಕೆಂದು ತಿಳಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಹೆಚ್ಚು ಹೆಚ್ಚು ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಪ್ರಸಕ್ತ ಚುನಾವಣೆಯಲ್ಲಿ ಅತ್ಯಧಿಕ ಮತದಾನವಾಗುವಂತೆ ಮತದಾರರನ್ನು ಪ್ರೇರೇಪಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಮಾರುತಿ ಎಂ. ಪಿ ಮಾತನಾಡಿ ಅಧಿಕಾರಿಗಳು ಯಾವುದೇ ಲೋಪದೋಷಗಳಿಲ್ಲದಂತೆ ಚುನಾವಣಾ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಬಾಬಾಸಾಬ ನೇಮಗೌಡ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ಜಾಬಗೌಡ್ರ , ಚುನಾವಣಾ ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.