ಮಾದರಿ ನೀತಿ ಸಂಹಿತೆ ಉಲ್ಲಂಘನೆ 3.87 ಲಕ್ಷ ನಗದು, 69.09 ಲೀ. ಮದ್ಯ ವಶ: ಡಿಸಿ


ಬಳ್ಲಾರಿ,ಏ.25: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಫ್‍ಎಸ್‍ಟಿ, ಎಸ್‍ಎಸ್‍ಟಿ, ಪೊಲೀಸ್ ಮತ್ತು ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ಮುಂದುವರೆದಿದ್ದು, ಸೋಮವಾರದಂದು 3,87,450 ರೂ. ಲಕ್ಷ ನಗದು ಹಣ ಮತ್ತು 31,087 ರೂ. ಮೌಲ್ಯದ 69.09 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಿಂದ 21,633 ರೂ. ಮೌಲ್ಯದ 47.22 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ 9,454 ರೂ. ಮೌಲ್ಯದ 21.87 ಲೀಟರ್ ಮದ್ಯ ಸೇರಿ ಒಟ್ಟು 31,087 ರೂ. ಮೌಲ್ಯದ 69.09 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿರುಗುಪ್ಪ ರಸ್ತೆಯ ಕ್ಲಾಸಿಕ್ ಫಂಕ್ಷನ್ ಹಾಲ್ ಬಳಿಯಿರುವ ಚೆಕ್‍ಪೋಸ್ಟ್‍ನಲ್ಲಿ ಎಸ್‍ಎಸ್‍ಟಿ ತಂಡವು ತಪಾಸಣೆ ವೇಳೆ 3,87,450 ರೂ. ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆಗಾಗಿ ಸಮಿತಿಯ ಮುಂದೆ ಹಾಜರುಪಡಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಒಟ್ಟು 43 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡಗಳು ಈಗಾಗಲೇ ಕಾರ್ಯಪ್ರವೃತ್ತವಾಗಿ ತಪಾಸಣೆ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.