ಮಾದರಿ ನೀತಿಸಂಹಿತೆ ನೆಪ – ಹೆಚ್ಚಾಗುತ್ತಿರುವ ನಾಗರೀಕರ ಪರಿತಾಪ!

ಶಿವಮೊಗ್ಗ, ಎ. 23: ‘ಒಂದೆಡೆ, ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲ ತಾಪ…
ಮತ್ತೊಂದೆಡೆ, ವಿಧಾನಸಭೆ ಚುನಾವಣೆಯ ಪರಿತಾಪ… ‘ಮತ ಬೇಟೆ’ಯಲ್ಲಿ ಮುಳುಗಿರುವ
ಜನಪ್ರತಿನಿಧಿಗಳು… ಚುನಾವಣಾ ಕೆಲಸಕಾರ್ಯಗಳಲ್ಲಿ ತಲ್ಲೀನವಾಗಿರುವ ಅಧಿಕಾರಿಗಳು…
ಇದೆಲ್ಲದರ ಪರಿಣಾಮದಿಂದ ನೆನೆಗುದಿಗೆ ಬೀಳಲಾರಂಭಿಸಿದೆ ನಾಗರೀಕ ಸಮಸ್ಯೆಗಳು..!’
ಹೌದು. ವಿಧಾನಸಭೆ ಚುನಾವಣೆ ಪ್ರಕ್ರಿಯೆಯಗಳು ಆರಂಭವಾದ ನಂತರ, ಸಾರ್ವಜನಿಕ
ಸಮಸ್ಯೆಗಳಿಗೆ ಆಡಳಿತ ಯಂತ್ರದ ಸ್ಪಂದನೆ ಕಡಿಮೆಯಾಗುತ್ತಿರುವ ದೂರುಗಳು
ಕೇಳಿಬರಲಾರಂಭಿಸಿದೆ. ಸಮಸ್ಯೆಗಳ ಪರಿಹಾರಕ್ಕೆ ಅಲೆದಾಡುವಂತಾಗಿದೆ. ಇದು ಸಹಜವಾಗಿಯೇ,
ನಾಗರೀಕರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಯಾವಾಗ ಚುನಾವಣೆ ಮುಗಿಯುತ್ತದೆಯೋ?
ಎಂದು ಕಾದು ಕುಳಿತುಕೊಳ್ಳುವಂತೆ ಮಾಡಿದೆ.
‘ಕೆಲ ಅಧಿಕಾರಿ-ಸಿಬ್ಬಂದಿಗಳು, ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಚುನಾವಣೆ ನೆಪ
ಹೇಳುತ್ತಿದ್ದಾರೆ. ಮಾದರಿ ನೀತಿ-ಸಂಹಿತೆ ಅಡ್ಡಿಯಾಗುತ್ತದೆ ಎನ್ನುತ್ತಾರೆ. ಚುನಾವಣಾ
ಕಾರ್ಯಕ್ಕೆ ನಿಯೋಜನೆಯಾಗದವರು, ಚುನಾವಣಾ ಕೆಲಸದಲ್ಲಿರುವುದಾಗಿ ತಿಳಿಸುತ್ತಾರೆ.
ಅಹವಾಲು ಕೇಳುವವರೇ ಇಲ್ಲವಾಗಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ’
ಎಂದು ಕೆಲ ನಾಗರೀಕರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
‘ಕೆಲವೆಡೆ ಅಭಿವೃದ್ದಿ ಕೆಲಸಕಾರ್ಯಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಅರ್ಧಂಬರ್ಧ
ರಸ್ತೆ ಕಾಮಗಾರಿ ಮಾಡಿ ನಿಲ್ಲಿಸಲಾಗಿದೆ. ಚುನಾವಣೆ ಹಾಗೂ ಮಾದರಿ ನೀತಿ ಸಂಹಿತೆ
ಅಡ್ಡಿಯಾಗದಿದ್ದರೂ ಕುಂಟು ನೆಪ, ಆಡಳಿತಾತ್ಮಕ ಅಡೆತಡೆ ಮುಂದಿಟ್ಟು ತೊಂದರೆ
ಕೊಡಲಾಗುತ್ತಿದೆ’ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಗೋಳು: ಪ್ರಸ್ತುತ ಬಿಸಿಲ ಬೇಗೆ ತೀವ್ರವಾಗಿದೆ. ಗ್ರಾಮೀಣ ಭಾಗದಲ್ಲಿ ಅಂತರ್ಜಲ ಮಟ್ಟ
ಗಂಭೀರವಾಗಿ ಕುಸಿಯುತ್ತಿದೆ. ಕುಡಿಯುವ ನೀರಿನ ಹಾಹಾಕಾರ ತಲೆದೋರುತ್ತಿದೆ. ತೋಟ,
ಹೊಲಗದ್ದೆಗಳಲ್ಲಿ ಬೆಳೆದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ಪೈರುಗಳು
ಒಣಗುತ್ತಿವೆ.
ಮತ್ತೊಂದೆಡೆ, ಜಾನುವಾರುಗಳು ಹಸಿರು ಮೇವಿಲ್ಲದೆ ಪರದಾಡುತ್ತಿವೆ. ಹಸಿವು
ಇಂಗಿಸಿಕೊಳ್ಳಲು ಪ್ಲ್ಯಾಸ್ಟಿಕ್, ಪೇಪರ್ ಮತ್ತೀತರ ತ್ಯಾಜ್ಯ ವಸ್ತು ತಿಂದು
ಅನಾರೋಗ್ಯಕ್ಕೆ ತುತ್ತಾಗಿ ಮೂಕಪ್ರಾಣಿಗಳು ಇಹಲೋಕ ತ್ಯಜಿಸುತ್ತಿವೆ.
ಆದರೆ ಎಲ್ಲಿಯೂ ಮೇವು ಬ್ಯಾಂಕ್ ತೆರೆದಿಲ್ಲ. ಪಶು ಪಾಲಕರಿಗೆ ರಿಯಾಯ್ತಿ ದರದಲ್ಲಿ
ಮೇವು ವಿತರಣೆ ಮಾಡಿ, ಮೂಕಪ್ರಾಣಿಗಳಿಗೆ ನೆರವಾಗುವ ಕಾರ್ಯ ನಡೆಸಿಲ್ಲ ಎಂದು ಕೆಲ
ಪಶುಪಾಲಕರು ದೂರುತ್ತಾರೆ.
ಗಮನಹರಿಸಲಿ: ಇನ್ನೂ ಹತ್ತು ಹಲವು ಸಾರ್ವಜನಿಕ ದೂರು-ದುಮ್ಮಾನಗಳು ಕೇಳಿಬರುತ್ತಿವೆ.
ಚುನಾವಣೆಯ ಜೊತೆಜೊತೆಗೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವುದು ಆಡಳಿತದ ಗುರುತರ
ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಗಮನಹರಿಸಬೇಕಾಗಿದೆ. ಈ
ಸಂಬಂಧ ಅಧಿಕಾರಿ-ಸಿಬ್ಬಂದಿಗಳಿಗೆ ಖಡಕ್ ಸೂಚನೆ ರವಾನಿಸಬೇಕು. ನೆಪ ಹೇಳದೆ
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಸುವಂತೆ ತಾಕೀತು ಮಾಡಬೇಕಾಗಿದೆ.