ಮಾದರಿ ತಾಲ್ಲೂಕು, ನನ್ನ ಪ್ರಯತ್ನಕ್ಕೆ ಸ್ಪಂದಿಸಿ

ಕೋಲಾರ,ಜೂ,೨- ನನ್ನ ಕ್ಷೇತ್ರವಾದ ಕೆಜಿಎಫ್ ತೀರಾ ಹಿಂದುಳಿದಿದ್ದು, ಇಲ್ಲಿನ ಜನತೆಗೆ ಉದ್ಯೋಗ,ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನಗಳಿಗೆ ಕಾರ್ಯಾಂಗದ ಭಾಗವಾಗಿರುವ ಸರ್ಕಾರಿ ನೌಕರರು ಸ್ಪಂದಿಸಿ, ನಿಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯದಲ್ಲಿ ನಿಮ್ಮೊಂದಿಗೆ ನಾನು ಸದಾ ಇರುವೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಭರವಸೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಕೆಜಿಎಫ್ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಹಾಗೂ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ಅವರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕೆಜಿಎಫ್ ಹೊಸ ತಾಲ್ಲೂಕು ಆಗಿದ್ದು, ಎಷ್ಟೇ ಅಭಿವೃದ್ದಿ ಮಾಡಿದರೂ ಇನ್ನು ಮಾಡಬೇಕಾದದ್ದು ಸಾಕಷ್ಟಿದೆ ಎಂದ ಅವರು, ಒಟ್ಟಾರೆಯಾಗಿ ಮಾದರಿ ತಾಲ್ಲೂಕು ಆಗಿಸುವ ನನ್ನ ಪ್ರಯತ್ನ ನಿರಂತರವಾಗಿದ್ದು, ಸರ್ಕಾರಿ ನೌಕರರು ಅಷ್ಟೇ ಬದ್ದತೆಯಿಂದ ಸ್ಪಂದಿಸಿ ಜನರಿಗಾಗಿ, ಕೆಜಿಎಫ್ ಅಭಿವೃದ್ದಿಗಾಗಿ ಕೆಲಸ ಮಾಡಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಿಜಿಎಂಎಲ್ ಶಾಲೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿ, ಈ ಶಾಲೆಯನ್ನು ಸರ್ಕಾರದ ವಶಕ್ಕೆ ಪಡೆಯುವ ಕುರಿತು ಗಮನಹರಿಸುವುದಾಗಿ ತಿಳಿಸಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರ ಸಭೆ ಕರೆಯುವುದಾಗಿಯೂ ಭರವಸೆ ನೀಡಿದರು.
ನೌಕರರ ಭವನಕ್ಕೆ ಅನುದಾನಕ್ಕೆ ಮನವಿ
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ೧೬ ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದೇವೆ, ನಮ್ಮ ಸಂಘದ ಚಟುವಟಿಕೆಗಳಿಗಾಗಿ ಸುಸಜ್ಜಿತ ಭವನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ತಾವು ಶಾಸಕರ ನಿಧಿಯಿಂದ ನೆರವು ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ಮತ್ತಿತರರಿದ್ದರು.