ಮಾದರಿ ಕೊರಟಗೆರೆ ನಿರ್ಮಾಣ: ಪರಮೇಶ್ವರ್

ಕೊರಟಗೆರೆ, ಸೆ. ೩- ಪಟ್ಟಣದ ಜನತೆಯ ಆರಾಧ್ಯ ದೈವ ಇತಿಹಾಸವುಳ್ಳ ಉದ್ಭವ ಕಟ್ಟೆಗಣಪತಿ ದೇವರಾಗಿದ್ದು, ಭಕ್ತರು ಸಂಕಲ್ಪ ಮಾಡಿಕೊಂಡ ಇಷ್ಟಾರ್ಥ ಸಿದ್ದಿಸುವ ನಂಬಿಕೆಯ ವಿಶೇಷ ಶಕ್ತಿಯುಳ್ಳ ಆರಾಧ್ಯ ದೇವರಾದ ಕಟ್ಟೆಗಣಪತಿಯ ಆಶೀರ್ವಾದದಿಂದ ಕೊರಟಗೆರೆ ಕ್ಷೇತ್ರದ ಜನತೆ ಸುಖ-ಶಾಂತಿಯಿಂದ ಇರುವಂತೆ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪ್ರಾರ್ಥಿಸಿದ್ದಾರೆ.
ಪಟ್ಟಣ ಕಟ್ಟೆಗಣಪತಿ ದೇವಾಲಯದ ಅಭಿವೃದ್ಧಿ ಮಂಡಲಿ, ಮಹಿಳಾ ಮಂಡಲಿ ಹಾಗೂ ಯುವಕ ಮಂಡಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಕಟ್ಟೆಗಣಪತಿ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿರುವ ಪರಿಸರ ಗಣಪತಿ ಹಾಗೂ ಉದ್ಭವ ಕಟ್ಟೆಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಗಣಪತಿಯ ಆಶೀರ್ವಾದ ದಿಂದ ನಾನು ಕೊರಟಗೆರೆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ದಿಯೊಂದಿಗೆ ಕೊರಟಗೆರೆ ಪಟ್ಟಣವನ್ನು ಮಾದರಿ ಪಟ್ಟಣ ಮಾಡುವ ನಿಟ್ಟಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮದ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಪಟ್ಟಣದ ಮೂಲಕ ಹಾದು ಹೋಗಿರುವ ಪ್ರಧಾನ ರಸ್ತೆಯನ್ನು ೧೦ ಕೋಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್ ರಸ್ತೆಯನ್ನಾಗಿ ಮಾಡಲಾಗಿದೆ ಎಂದರು.
ಪಟ್ಟಣದ ಒಳ ರಸ್ತೆಗಳನ್ನು ಸಿ.ಸಿ. ರಸ್ತೆಗಳನ್ನಾಗಿ ಮತ್ತು ಉತ್ತಮ ರೀತಿಯ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಗೋಕುಲದ ಕೆರೆಯ ಅಭಿವೃಧ್ದಿ ಮಾಡಿ ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ, ಯುವಕರಿಗೆ ಕೆರೆಯ ಸುತ್ತ ವಾಕಿಂಗ್ ಪಾತ್ ನಿರ್ಮಾಣ ಹಾಗೂ ಮಕ್ಕಳಿಗೆ ಪಾರ್ಕ್ ನಿರ್ಮಾಣ, ಕೆರೆ ಮಧ್ಯೆ ಭಾಗದಲ್ಲಿ ನೀರಿನ ಚಿಲುಮೆಯೊಂದಿಗೆ ಮಕ್ಕಳಿಗೆ ಬೋಟಿಂಗ್ ವ್ಯವಸ್ಥೆಯ ಯೋಜನೆಗೆ ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ೩.೫ ಕೋಟಿ ಹಣ ಮಂಜೂರು ಮಾಡಿಸಿದ್ದು, ಕೆರೆ ಕಾಮಗಾರಿ ಪ್ರಾರಂಭಕ್ಕೂ ಮುನ್ನವೇ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ಹಣ ವಾಪಸ್ ಪಡೆಯಲಾದ ಹಿನ್ನೆಲೆಯಲ್ಲಿ ಕೆರೆ ಕಾಮಗಾರಿಗೆ ಹಿನ್ನಡೆ ಉಂಟಾಯಿತು. ಆದರೂ ಮುಂದಿನ ದಿನಗಳಲ್ಲಿ ಹಣ ಮತ್ತೆ ಮಂಜೂರು ಮಾಡಿಸಿ ಗೋಕುಲದ ಕೆರೆ ಅಭಿವೃದ್ದಿ ಮಾಡಿಸುವ ಭರವಸೆ ನೀಡಿದರು.
ಉದ್ಯಾನವನ ನಿರ್ಮಾಣ
ಕೊರಟಗೆರೆ ಪಟ್ಟಣದಲ್ಲಿ ಉದ್ಯಾನವನದ ಕೊರತೆಯಿದ್ದು, ಉದ್ಯಾನವನ ನಿರ್ಮಾಣಕ್ಕೆ ಪ್ರವಾಸಿ ಮಂದಿರದ ಬಳಿ ೩೨ ಎಕರೆ ಸ್ಥಳ ನಿಗದಿ ಮಾಡಿದ್ದು, ಶೀಘ್ರದಲ್ಲಿಯೇ ಸಸಿಗಳನ್ನು ನಡುವ ಮೂಲಕ ಉದ್ಯಾನವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದ ಅವರು, ಶಾಸಕನ್ನಾಗಿ ಮಾಡಿದ ಕೊರಟಗೆರೆ ಕ್ಷೇತ್ರದ ಜನತೆಯ ಸೇವೆಯೇ ನನ್ನ ಗುರಿಯಾಗಿದ್ದು ಕೊರಟಗೆರೆ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದರು.
ಈ ಸಂದರ್ಭಧಲ್ಲಿ ಕಟ್ಟೆಗಣಪತಿ ದೇವಾಲಯದ ಅಭಿವೃಧ್ದಿ ಮಂಡಲಿಯ ಎನ್. ಪದ್ಮನಾಭ್, ಪ.ಪಂ. ಮಾಜಿ ಉಪಾಧ್ಯಕ್ಷ ಕೆ.ವಿ. ಮಂಜುನಾಥ್, ಯುವಕ ಮಂಡಲಿಯ ಅಧ್ಯಕ್ಷ ಬೆನಕ ವೆಂಕಟೇಶ್, ಮಹಿಳಾ ಮಂಡಲಿ ಅಧ್ಯಕ್ಷೆ ಗಿರಿಜಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಪ.ಪಂ. ಸದಸ್ಯ ಕೆ.ಆರ್. ಓಬಳರಾಜು, ನಂದೀಶ್, ಗಟ್ಲಹಳ್ಳಿ ಕುಮಾರ್, ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೊತ್ತಮ್, ಕಟ್ಟೆಗಣಪತಿ ಯುವಕ ಸಂಘದ ಪದಾಧಿಕಾರಿಗಳಾದ ವೇದಬ್ರಹ್ಮ ದತ್ತಾತ್ರೆಯ ದೀಕ್ಷಿತ್, ಸಂಜಯ್, ಗುರುದತ್ ದೀಕ್ಷಿತ್, ಕೆ.ಪಿ. ಅಭಿಲಾಷ್, ಪಿಎಲ್‌ಡಿ ಬ್ಯಾಂಕ್ ವಿಜಯ್‌ಕುಮಾರ್, ಪತ್ರಕರ್ತ ಜಿ.ಎಲ್. ಸುರೇಶ್, ರಂಜಿತ್, ಸಿದ್ದೇಶ್, ಗೋಪಿನಾಥ್, ದಿಲೀಪ್‌ಕುಮಾರ್, ಚಿರು, ಜಗನ್ನಾಥ್, ದೀಪು, ಮಧು, ಕಿರಣ್‌ಕುಮಾರ್, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.