ಮಾದರಿ ಆಡಳಿತ : ಮೂಲಭೂತ ಸೌಕರ್ಯ ಆದ್ಯತೆ

ರಾಯಚೂರು.ನ.12- ನಗರದ ಜನರ ನಿರೀಕ್ಷೆಯಂತೆ ರಸ್ತೆ, ಚರಂಡಿ ಹಾಗೂ ಸೌಂದರ್ಯೀಕರಣ ಮತ್ತಿತರ ಅಭಿವೃದ್ಧಿ ಕಾರ್ಯ ಮೂಲಕ ವೇಗವಾಗಿ ಬದಲಾವಣೆಯ ಆಡಳಿತದ ಪರಿಚಯ ಜನರಿಗೆ ತೋರಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ನಗರಸಭೆ ನೂತನ ಅಧ್ಯಕ್ಷ ಈ.ವಿನಯ್ ಕುಮಾರ ಅವರು ಹೇಳಿದರು.
ಹೈಕೋರ್ಟ್ ಆದೇಶದಂತೆ ಇಂದು ಚುನಾವಣಾಧಿಕಾರಿಯಾದ ಸಹಾಯಕ ಆಯುಕ್ತರು ಫಲಿತಾಂಶ ಘೋಷಣೆ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿದ ಅವರು, ಮಾಧ್ಯಮದೊಂದಿಗೆ ಮಾತನಾಡಿದರು. ಚುನಾವಣಾಧಿಕಾರಿಯಾದ ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ ಅವರು ಇಂದು ಫಲಿತಾಂಶ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ನಾನು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡಿರುವುದಾಗಿ ಮತ್ತು ನಮ್ಮದೇ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನರಸಮ್ಮ ನರಸಿಂಹಲು ಮಾಡಗಿರಿ ಅವರು 18 ಮತಗಳು ಜಯಗಳಿಸಿದ್ದಾರೆಂದು ಘೋಷಿಸಿದ್ದು, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಗರದ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ಮೂಲಕ ಮಾದರಿ ಆಡಳಿತ ನೀಡುವುದಾಗಿ ಹೇಳಿದರು.
ಎರಡು ವರ್ಷ ಎರಡು ತಿಂಗಳ ನಂತರ ನಗರಸಭೆಯಲ್ಲಿ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಹಜವಾಗಿ ಜನ ಭಾರೀ ಬದಲಾವಣೆಯ ನಿರೀಕ್ಷೆ ಹೊಂದಿದ್ದಾರೆ. ಜನರ ನಿರೀಕ್ಷೆಯಂತೆ ಎಲ್ಲಾ 34 ಸದಸ್ಯರ ಸಹಕಾರದೊಂದಿಗೆ ಶಾಸಕ ಡಾ.ಶಿವರಾಜ ಪಾಟೀಲ್, ಸಂಸದರಾದ ಅಮರೇಶ್ವರ ನಾಯಕ ಹಾಗೂ ಕಾಂಗ್ರೆಸ್ ಮುಖಂಡರ ಸಹಾಯ, ಸಹಕಾರದೊಂದಿಗೆ ವೇಗದ ಬದಲಾವಣೆಯೊಂದಿಗೆ ಆದ್ಯತೆ ನೀಡಿ, ಕ್ರಮ ಕೈಗೊಳ್ಳಲಾಗುತ್ತದೆ. ನಗರದ ರಸ್ತೆಗಳು, ಸಸಿ ನೆಡುವುದು, ಐತಿಹಾಸಿಕ ಮಾವಿನ ಕೆರೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಪರಿಣಾಮಕಾರಿಯಾಗಿ ಘನತ್ಯಾಜ್ಯ ವಿಲೇವಾರಿ ಹಾಗೂ ನಗರದ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಿ, ಆಡಳಿತ ನಿರ್ವಹಿಸಲಾಗುತ್ತದೆ.
ನಗರದ ಸಮಗ್ರ ಅಭಿವೃದ್ಧಿಗಾಗಿ ಉತ್ತಮ ಆಡಳಿತ ನಿರ್ವಹಿಸಲು ಹಿರಿಯರ ಮಾರ್ಗದರ್ಶನ, ಎಲ್ಲಾ ಮಠಾಧೀಶರು, ಚರ್ಚ್ ಫಾದರ್ಸ್, ಮೌಲಿಗಳು ಎಲ್ಲರ ಆಶೀರ್ವಾದದೊಂದಿಗೆ ಜನರ ಮನೆ ಮಗನಾಗಿ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ನಗರದಲ್ಲಿ ಅನೇಕ ರಸ್ತೆ, ಬಡಾವಣೆಗಳಲ್ಲಿ ಘನತ್ಯಾಜ್ಯ ಸಂಗ್ರಹಗೊಂಡಿದೆ. ಇದನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಮುಂದಿನ ಪ್ರಮುಖ ಗುರಿಯಾಗಿದೆ. ಪ್ರತಿನಿತ್ಯ ಜನರಿಗೆ ಕುಡಿವ ನೀರಿನ ಸೌಲಭ್ಯ ದೊರೆಯುವುದರೊಂದಿಗೆ ವಿದ್ಯುತ್ ಸೌಕರ್ಯಕ್ಕೆ ಬೀದಿ ದೀಪಗಳ ಸಮರ್ಪಕವಾಗಿ ನಿರ್ವಹಣೆಗೆ ಗಮನ ಹರಿಸಲಾಗುತ್ತದೆ.
ಇತ್ತೀಚಿಗೆ ಸುರಿದ ಮಳೆಯಿಂದ ಬಡಾವಣೆಗಳಿಗೆ ನೀರು ನುಗ್ಗಿ ಜನ ತೀವ್ರ ತೊಂದರೆಗೆ ಗುರಿಯಾಗಿದ್ದಾರೆ.
ಇಂತಹ ಅವಘಡ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮಹಾಮಾರಿ ಕೊರೊನಾ ನಿಯಂತ್ರಣಾ ಮತ್ತು ಇದಕ್ಕೆ ಬೇಕಾದ ರಾಜ್ಯ, ಕೇಂದ್ರ ಸರ್ಕಾರ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸುತ್ತೇನೆ. ಉಪಾಧ್ಯಕ್ಷರಾದಂತಹ ನರಸಮ್ಮ ಮಾಡಗಿರಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಉತ್ತಮ ಆಡಳಿತ ನಿರ್ವಹಿಸುವ ಮೂಲಕ ನಗರದಲ್ಲಿ ಅಭಿವೃದ್ಧಿಯ ಹೊಸ ಭರವಸೆಗಳು ಮೂಡುವಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು. ದೀಪಾವಳಿಯ ಸಂದರ್ಭದಲ್ಲಿ ಎಲ್ಲಾರಿಗೂ ಶುಭ ಕೋರಿದ ಅವರು, ಆಯುಕ್ತರು ಮತ್ತು ನಗರಸಭೆ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಚುರುಕು ರೀತಿಯಲ್ಲಿ ಜನಸ್ನೇಹಿ ಆಡಳಿತ ನಡೆಸಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಜಿಂದಪ್ಪ, ಹೇಮಲತಾ, ಎನ್.ಶ್ರೀನಿವಾಸ ರೆಡ್ಡಿ, ಬಿ.ರಮೇಶ, ಸಾಜೀದ್ ಸಮೀರ್, ದರೂರು ಬಸವರಾಜ, ಸುನೀಲ್, ಹರಿಬಾಬು, ತಿಮ್ಮಾರೆಡ್ಡಿ, ವಾಹೀದ್, ಹಾಜೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.