ಮಾದಪ್ಪನಿಗೆ ಬಾದಮಿ ಅಮಾವಾಸ್ಯೆ ವಿಶೇಷ ಪೂಜೆ: ಹರಿದು ಬಂದ ಭಕ್ತ ಸಾಗರ

ಸಂಜೆವಾಣಿ ವಾರ್ತೆ
ಹನೂರು ಜೂ 7 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ವಿಶೇಷವಾಗಿ ಸಹಸ್ರಾರು ಭಕ್ತಾದಿಗಳು ಆಗಮಿಸಿ ಮಲೆ ಮಾದಪ್ಪನ ದರ್ಶನ ಪಡೆದು ಧೂಪ ಕರ್ಪೂರ ಹಚ್ಚಿ ಹರಕೆ ಪೂಜಾ ಸೇವೆ ಪುನಸ್ಕಾರಗಳನ್ನು ಸಲ್ಲಿಸಿದರು.
ಅಮಾವಾಸ್ಯೆ ದಿನದ ಹಿನ್ನೆಲೆ ಮಲೆ ಮಾದಪ್ಪನ ಸನ್ನಿಧಿಗೆ ಹರಿದು ಬಂದ ಸಹಸ್ರಾರು ಭಕ್ತಾದಿಗಳು ಹರಕೆ ಪೂಜೆಗಳನ್ನು ಸಲ್ಲಿಸಿದ್ದಾರೆ. ಹರಕೆ ಹೊತ್ತ ಭಕ್ತಾದಿಗಳು ಹರಳೆಣ್ಣೆ ಬತ್ತಿಯನ್ನು ಹಚ್ಚಿಕೊಂಡು ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿ ನಮಸ್ಕರಿಸುತ್ತಾ ಪಂಜಿನ ಸೇವೆ ಸಲ್ಲಿಸಿದ್ದಾರೆ.
ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನಕ್ಕೆ ಪೂಜೆ ಸಲ್ಲಿಸಿ ದೇವಾಲಯ ಸುತ್ತ ಎಳೆದು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಧೂಪ ಕರ್ಪೂರ ದೀಪ ಹಚ್ಚಿ ಪೂಜೆ ಸಲ್ಲಿಸಿ ಭಕ್ತಿ ಪರಾಕಾಷ್ಠೆ ಮೆರೆದು ಮಲೆ ಮಾದಪ್ಪನ ಕೃಪೆಗೆ ಪಾತ್ರರಾದರು. ಸಂಜೆ ಚಿನ್ನದ ತೇರನ್ನು ಎಳೆದು ಪೂಜೆ ಸಲ್ಲಿಸಿದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸೇವೆಯನ್ನು ಸಲ್ಲಿಸಿದ್ದಾರೆ.
ಅಮಾವಾಸ್ಯೆ ಪೂಜೆ ಸಲ್ಲಿಸಲು ತಮಿಳುನಾಡು ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿ ಆಗಮಿಸಿದೆ. ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಇರುವುದರಿಂದ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸೇವೆಯನ್ನು ಸಲ್ಲಿಸಿದ್ದಾರೆ.
ಮಳೆಯಲ್ಲಿ ಮಿಂದೆದ್ದ ಭಕ್ತರು:
ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಯಂಕಾಲ ಸುರಿದ ಮಳೆಯಿಂದ ಭಕ್ತಾದಿಗಳು ನೆನೆದು ಮಿಂದೆದ್ದು ಮಳೆಯಲ್ಲಿ ನೆನೆದು ಮಲೆ ಮಾದಪ್ಪನ ಸನ್ನಿಧಿಯ ಸುತ್ತಲೂ ಪ್ರದಕ್ಷಣೆಯಾಗಿ ಪೂಜೆ ಸಲ್ಲಿಸಿದರು. ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಸಾಯಂಕಾಲ ಇದ್ದಕ್ಕಿದ್ದಂತೆ ಜೋರಾದ ಮಳೆ ಸುರಿದು ತಂಪಾದ ವಾತಾವರಣದಲ್ಲಿ ಭಕ್ತರು ಮಲೆ ಮಾದಪ್ಪನ ದರ್ಶನ ಪಡೆದರು.