ಮಾದಕ ವಸ್ತು ಮಾರಾಟ ನಿಯಂತ್ರಣ: ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಸೂಚನೆ

ದಾವಣಗೆರೆ; ಸೆ.20: ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಗೆ ಯುವಜನರು ಆಕರ್ಷಿತರಾಗುವುದನ್ನು ನಿಯಂತ್ರಿಸಲು ಜಿಲ್ಲೆಯ ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಾರ್ಕೋ-ಕೋಆರ್ಡಿನೇಷನ್ ಸೆಂಟರ್ (ಎನ್‍ಸಿಒಆರ್‍ಡಿ) ಮೆಕ್ಯಾನಿಸಂ ಮತ್ತು ಸಿಗರೇಟ್ ಮತ್ತು ಇತರ ತುಂಬಾಕು ಉತ್ಪನ್ನಗಳ ನಿμÉೀಧ ಕಾಯ್ದೆ (ಸಿಒಟಿಪಿಎ) ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಹಾಗೂ ತಂಬಾಕು ಉತ್ಪನ್ನಗಳನ್ನು ಹೆಚ್ಚಾಗಿ ಬೆಳೆಯುವ ಸಾಧ್ಯತೆ ಇದ್ದು, ಅಂತಹ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಗಾಂಜಾ ಮಾರಾಟ ಮಾಡುವುದು ಹಾಗೂ ಬೆಳೆಯುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಯುವಕರು ಮಾದಕ ವಸ್ತುಗಳಿಗೆ ಹೆಚ್ಚು ಬಲಿಯಾಗುತ್ತಿದ್ದು,  ಹಾಸ್ಟೆಲ್ ಮತ್ತು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವರ್ತನೆಯನ್ನು ಗಮನಿಸಬೇಕು. ಅನುಮಾನ ಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಸಂದರ್ಶಿಸಿ ಖಿನ್ನತೆಯಿಂದ ವಿಮುಕ್ತರನ್ನಾಗಿ ಮಾಡಬೇಕು. ಜಿಲ್ಲೆಯ ಕಾರಗೃಹಗಳಲ್ಲಿ ಕೈದಿಗಳಿಗೆ ಗಾಂಜ ಹಾಗೂ ತಂಬಾಕು ಉತ್ಪನ್ನಗಳನ್ನು ಪೂರೈಸುತ್ತಿದ್ದಾರೆ ಎಂದು ಕೇಳಿ ಬರುತ್ತಿದ್ದು ಪೊಲೀಸ್ ಇಲಾಖೆ ಕ್ರಮ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆ ನಿಯಂತ್ರಿಸಲು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಇಲಾಖೆಗಳು ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿಲ್ಲಾ ಉಪ ವಿಭಾಗಾಧಿಕಾರಿ ದುರ್ಗಶ್ರೀ, ಡಿ.ಡಿ.ಪಿ.ಐ ಕೊಟ್ರೇಶ್ ಉಪಸ್ಥಿತರಿದ್ದರು.