ಮಾದಕ ವಸ್ತು ಚಟುವಟಿಕೆಗಳ ವಿರುದ್ದ ಕಟ್ಟೆಚ್ಚರ : ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ

ಚಾಮರಾಜನಗರ, ಸೆ.17- ಜಿಲ್ಲೆಯಲ್ಲಿ ಗಾಂಜಾ ಬೆಳೆ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಚಟುವಟಿಕೆಗಳಿಗೆ ಅವಕಾಶವಾಗದಂತೆ ಅಧಿಕಾರಿಗಳು ಕಟ್ಟೆಚ್ಚೆರ ವಹಿಸಿ ಅಕ್ರಮ ನಡೆಸುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಡ್ರಗ್ಸ್ ದಂಧೆ ನಿಯಂತ್ರಣಾ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಜನಾಂಗವನ್ನು ತಪ್ಪು ದಾರಿಗೆ ಕರೆದೊಯ್ದು ಸಮಾಜದ ಸ್ವಾಸ್ತ್ಯ ಹಾಳುಮಾಡುವ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರ ಚಟುವಟಿಕೆಗಳು ಜಿಲ್ಲೆಯ ಯಾವುದೇ ಭಾಗದಲ್ಲಿ ನಡೆಯದಂತೆ ಅಧಿಕಾರಿಗಳು ನಿಗಾವಹಿಸಬೇಕು. ಇತ್ತೀಚೆಗೆ ಗಾಂಜಾ ಬೆಳೆದಿರುವ ಪ್ರಕರಣ ಬೇಧಿಸಲಾಗಿದೆ. ಹೀಗಾಗಿ ಕಂದಾಯ, ಅಬಕಾರಿ, ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಸಂಘಟಿತರಾಗಿ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ವಿಶೇಷ ಕಣ್ಗಾವಲು ಇರಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಸರ್ಕಾರಿ ಜಮೀನಿರಲಿ ಅಥವಾ ಖಾಸಗಿಯವರ ಭೂಮಿಯೇ ಇರಲಿ ಎಲ್ಲ ಕಡೆ ಕಂದಾಯ ಅಧಿಕಾರಿಗಳು ನಿಗಾ ಇಟ್ಟಿರಬೇಕು. ಯಾವ ಬೆಳೆ ಬೆಳೆಯಲಾಗುತ್ತಿದೆ ಎಂಬ ಮಾಹಿತಿಯನ್ನು ಆಯ ಗ್ರಾಮಲೆಕ್ಕಿಗರಿಂದ ಮಾಹಿತಿ ಸಂಗ್ರಹಣೆ ಮಾಡಬೇಕು, ಅಕ್ರಮವಾಗಿ ಗಾಂಜಾ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಬೆಳೆ ಬೆಳೆದಿರುವುದು ಕಂಡು ಬಂದಲ್ಲಿ ಕೂಡಲೇ ವರದಿ ಮಾಡಿ ಪ್ರಕರಣ ದಾಖಲಿಸಬೇಕು. ಆರ್.ಟಿ.ಸಿ ಹೊಂದಿರುವ ಮಾಲೀಕರ ವಿರುದ್ದವೇ ಮೊದಲು ಪ್ರಕರಣ ಹೂಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕಾಡಂಚಿನ ಭಾಗ ಹಾಗೂ ಅರಣ್ಯ ಗಡಿ ಭಾಗದಲ್ಲಿ ವಿಶೇಷ ನಿಗಾವಹಿಸಬೇಕು. ಗಾಂಜಾ ಸೇರಿದಂತೆ ಯಾವುದೇ ಮಾದಕ ಅಕ್ರಮ ಚಟುವಟಿಕೆಗಳು ನಡೆಯದಂತೆ ಅರಣ್ಯ, ಪೊಲೀಸ್, ಅಬಕಾರಿ, ಇಲಾಖೆಗಳು ಗಸ್ತು ವ್ಯವಸ್ಥೆಯನ್ನು ತೀವ್ರಗೊಳಿಸಬೇಕು, ಕಂದಾಯ ಇಲಾಖೆ ಅಧಿಕಾರಿಗಳಿಗೆ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳೂ ಸಹ ನೆರವು ನೀಡಬೇಕು. ತಾಲ್ಲೂಕು ಮಟ್ಟಲ್ಲಿ ಸ್ಕ್ವಾಡ್ ರಚಿಸಿ ಮಾದಕ ವಸ್ತುಗಳ ಚಟುವಟಿಕೆಗಳು ಎಲ್ಲಿಯೇ ಕಂಡು ಬಂದಲ್ಲಿ ಕೂಡಲೇ ಜಂಟಿ ಕಾರ್ಯಚರಣೆ ನಡೆಸಿ ಅಕ್ರಮದ ವಿರುದ್ದ ಕ್ರಮ ಜರುಗಿಸಬೇಕೆಂದು ಸೂಚಿಸಿದರು.
ಹೋಂ ಸ್ಟೇ, ರೆಸಾರ್ಟ್‍ಗಳ ಮೇಲೂ ಕಟ್ಟೆಚ್ಚರ ಇರಬೇಕು, ಹೊರಗಿನಿಂದ ಬರುವ ಜನರ ಮೇಲೆ ಕಣ್ಗಾವಲು ಇಡಬೇಕು, ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ಇರಬೇಕು, ಅಂತರ ರಾಜ್ಯ ಚೆಕ್‍ಪೋಸ್ಟ್‍ಗಳು ಸೇರಿದಂತೆ ಇತೆರೆ ಚೆಕ್‍ಪೋಸ್ಟ್ ಗಳಲ್ಲಿಯೂ ತಪಾಸಣೆ ಕಾರ್ಯ ಚುರುಕುಗೊಳಿಸಬೇಕು. ಅಧಿಕಾರಿಗಳು ವ್ಯಾಪಕವಾಗಿ ಎಲ್ಲೆಡೆ ಭೇಟಿ ನೀಡಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜಾಗೃತಿ ಸಭೆ ನಡೆಸುವ ಮೂಲಕ ಜನರಿಗೆ ಅರಿವು ಮೂಡಿಸಬೇಕು, ಆರೋಗ್ಯ ಇಲಾಖೆ ನೆರವಿನೊಂದಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಮನೋ ವೈದ್ಯರಿಂದಲೂ ಆಪ್ತ ಸಮಾಲೋಚನೆ ಇತರೆ ವಿಧಾನಗಳ ಮೂಲಕ ಜನರಿಗೆ ಮಾರ್ಗದರ್ಶನ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿತಾ ಬಿ ಹದ್ದಣ್ಣನವರ್ ಅವರು ಮಾತನಾಡಿ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವವರ ವಿರುದ್ದ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಚಟುವಟಿಕೆ ನಡೆಯದಂತೆ ನಿಗಾವಹಿಸಿದ್ದು ಎಲ್ಲಾ ಅಕ್ರಮ ಕೃತ್ಯಗಳನ್ನು ಮಟ್ಟ ಹಾಕಲು ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.
ಅಬಕಾರಿ ಉಪಆಯುಕ್ತರಾದ ಮುರುಳೀಧರ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಹಿರಿಯ ಅರಣ್ಯ ಅÀಧಿಕಾರಿಗಳಾದ ಬಾಲಚಂದ್ರ, ಸಂತೋಷ್‍ಕುಮಾರ್, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ಕೆ. ಕುನಾಲ್, ನಂಜುಂಡಯ್ಯ, ಸುದರ್ಶನ್, ವೈದ್ಯ ಅಧಿಕಾರಿಗಳಾದ ಡಾ. ರಾಜು, ಕೃಷಿ ಜಂಟಿ ನಿರ್ದೇಶಕರಾದ ಚಂದ್ರಕಲಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.