ಮಾದಕ ವಸ್ತುಗಳ ಸೇವೆನೆ ಆರೋಗ್ಯಕ್ಕೆ ಹಾನಿಕರ: ಡಾ. ದೇಸಾಯಿ


ಹುಬ್ಬಳ್ಳಿ, ನ 13: ಮಾದಕ ವಸ್ತುಗಳ ಸೇವನೆ ಅನಾರೋಗ್ಯಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕ ಡಾ.ಮಹೇಶ್ ದೇಸಾಯಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶನಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಡಿಮ್ಹಾನ್ಸ್ ಸಹಯೋಗದೊಂದಿಗೆ, ಹಳೇ ಹುಬ್ಬಳ್ಳಿಯ ಶಿವ ಶಂಕರ ಕಾಲೋನಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾದ ಮಾದಕ ದ್ರವ್ಯ ವ್ಯಸನದ ವಿರುದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ಆಗುವ ಹಾನಿಗಳ ಬಗ್ಗೆ ಜನರು ಜಾಗೃತರಾಗಬೇಕು. ಮನೋವೈದ್ಯಕೀಯ ತಂಡದವರು ಇಂತಹ ಮಾದಕ ವಸ್ತುಗಳ ಸೇವನೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲು ನಿರಂತರ ಪ್ರಯತ್ನಿಸುತ್ತಿದೆ. ಮಹಿಳೆಯರಲ್ಲಿ ದುಶ್ಚಟಗಳು ಕಂಡು ಬರುತ್ತವೆ. ಸೂಕ್ತವಾದ ಚಿಕಿತ್ಸೆ ಕೂಡ ಮಾದಕ ವಸ್ತುಗಳ ಸೇವನೆ ಬಿಡಲು ಸಹಾಯಕವಾಗುತ್ತವೆ ಎಂದು ತಿಳಿಸಿದರು.
ಅತಿಯಾದ ಮಾದಕ ಸೇವನೆಗಳಿಂದ ಮಿದುಳಿನ ಮೇಲೆ ನಕರಾತ್ಮಕವಾಗಿ ಪರಿಣಾಮವಾಗುತ್ತದೆ. ಮೂಢ ನಂಬಿಕೆಗಳಿಂದ ದೂರವಿರಬೇಕು ಎಂದರು. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಮಾದಕ ವಸ್ತುಗಳಿಗೆ ಅಂಟಿಕೊಂಡಿರುವ ವ್ಯಕ್ತಿಗಳಿಗೆ ಕೊಡಿಸಬೇಕು. ಇಲ್ಲದೇ ಹೋದಲ್ಲಿ ಇಂತಹ ವ್ಯಕ್ತಿಗಳ ಆರೋಗ್ಯ ಕೆಡುತ್ತದೆ. ಕುಟುಂಬದ ಸದಸ್ಯರು ಮಾದಕ ವಸ್ತುಗಳಿಗೆ ಅಂಟಿಕೊಂಡಿರುವ ವ್ಯಕ್ತಿಗಳಿಗೆ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಕಮಲವ್ವ ಬೈಲೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಸತೀಶ್ ಕೌಜಲಗಿ, ಡಾ.ವಿನುತಾ ಮತ್ತು ಅಶೋಕ ಕೋರಿ ಉಪನ್ಯಾಸ ನೀಡಿದರು. ಕರಿಯಪ್ಪ, ವಿಶಾಲಾ, ಶ್ವೇತಾ, ಮಹಮ್ಮದ್ ಅಲಿ ಮತ್ತು ಭಾರತಿ ಉಪಸ್ಥಿತರಿದ್ದರು.