ಮಾದಕ ವಸ್ತುಗಳ ಸೇವನೆ ಸಮಾಜಕ್ಕೆ ದೊಡ್ಡ ಪಿಡುಗು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.04: ಮಾದಕ ವಸ್ತುಗಳ ಸೇವನೆ ಸಾಮಾನ್ಯವಾಗಿ ಪ್ರಪಂಚಾದ್ಯಂತ ಗಂಡು,ಹೆಣ್ಣು, ಬಡವ, ಶ್ರೀಮಂತ ಎನ್ನುವ ಭೇದವಿಲ್ಲದೆ ಕಂಡುಬರುವ “ಒಂದು ದೊಡ್ಡ ಪಿಡುಗು” ಎಂದು ಸಿವಿಲ್ ಮತ್ತು ಜೆಎಂಎಫ್‍ ನ್ಯಾಯಾಧೀಶ ಹಾಜೀಹುಸೇನ ಸಾಬ್ ಯಾದವಾಡ ತಿಳಿಸಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಕಾನೂನು ಅರಿವು ಮತ್ತು ನೆರವು ಅಡಿಯಲ್ಲಿ ಮಾದಕ ವ್ಯಸನದ ತಡೆಗಟ್ಟುವಿಕೆ, ಸಂತ್ರಸ್ತರ ಚಿಕಿತ್ಸೆ ಮತ್ತು ಪುನರ್ವಸತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈಧ್ಯ ನಾಗರಾಜ ಶೆಟ್ಟಿ ಮಾತನಾಡಿ, ಮಾದಕ ಉತ್ತೇಜಕ ಪದಾರ್ಥ. ಇಂಥವುಗಳನ್ನು ಸೇವಿಸುವುದರಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿ ತಲುಪುತ್ತಾನೆ.ಮದ್ಯ, ತಂಬಾಕು, ಗಾಂಜಾ, ಕೋಕೇನ್, ಓಪಿಯಮ್, ಆಂಫಿಟಮೈನ್, ಹಿರಾಯಿನ್, ಎಲ್.ಎಸ್.ಡಿ., ಪಿ.ಸಿ.ಪಿ., ನಿದ್ದೆ ಮಾತ್ರೆಗಳು, ಅನಿಲಗಳು ( ವೈಟನರ್ , ಪೆಟ್ರೋಲಿಯಮ್ ಉತ್ಪನ್ನಗಳು ) ಮಾದಕ ವಸ್ತುಗಳಾಗಿವೆ.
ಇಂಥವುಗಳ ಸೇವನೆಯಿಂದ ವ್ಯಕ್ತಿಯು ಲೋಲುಪ್ತತೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾನೆ. ಅಮಲು ಒಂದು ವಿಷ ಎಂದು ನೆನಪಿಡಿ. ಆದ್ದರಿಂದ, ನಾವು ಅಮಲು ಪದಾರ್ಥಗಳನ್ನು ಸೇವಿಸಬಾರದು. ಈ ಸಮಸ್ಯೆಯಿಂದ ಬಳಲುತ್ತಿರುವವರು ಅದನ್ನು ದೃಢ ಸಂಕಲ್ಪ ದಿಂದ ಬಿಡಬೇಕು.
ಹಿರಿಯ ಸಿವಿಲ್ ನ್ಯಾಯಾಧೀಶೆ ಎಮ್.ಡಿ.ಪವಿತ್ರ, ಸರ್ಕಾರಿ ಸಹಾಯಕ ಅಭಿಯೋಜಕಿ ಬಿ.ಎಲ್.ಶಾರದ, ಟಿ.ಎಚ್.ಒ ಡಾ.ಈರಣ್ಣ, ವಕೀಲ ಸಂಘದ ತಾ.ಅಧ್ಯಕ್ಷ ಎಸ್.ಮಂಜುನಾಥ ಗೌಡ, ವಕೀಲರಾದ ಎನ್.ಅಬ್ದುಲ್ ಸಾಬ್, ಟಿ.ವೆಂಕಟೇಶ ನಾಯ್ಕ್, ಎಂ.ಮಲ್ಲಿಗೌಡ, ಹೆಚ್.ಕೆ.ರಾಮಪ್ಪ ಇದ್ದರು.