ಮಾದಕ ವಸ್ತುಗಳ ವಿರೋಧಿ ದಿನಾಚರಣೆ

ಮಾನ್ವಿ,ಜೂ.೨೭-
ತಾಲೂಕಿನ ಪೋತ್ನಾಳ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ ಪೋತ್ನಾಳ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಕಾಣಿಕೆ ವಿರೋಧಿ ದಿನಾಚರಣೆಯನ್ನು ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪನಾಯಕ ಇಂದಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಮಾದಕ ಪದಾರ್ಥಗಳ ವೆಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗೂ ಮಾದಕ ವಸ್ತುಗಳ ಸೇವನೆ ಮಾಡುವ ಯುವ ಸಮುದಾಯ ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯ ಕೂಡ ಹಾಳಾಗುತ್ತಿದೆ ಎಂದರು.
ನಂತರ ಕಾಲೇಜಿನ ಪ್ರಾಚಾರ್ಯ ರಾಮಣ್ಣ ಮಾತನಾಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದೆ ತಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಹದಿ ಹರೆಯದ ವಯಸ್ಸಿನಲ್ಲಿ ಕ್ಷಣಿಕ ಸುಖ ನೀಡುವ ಮಾದಕ ವಸ್ತುಗಳ ಮೋಹಕ್ಕೆ ಬಿದ್ದು ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಮಲ್ಲಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು.