ಮಾದಕ ವಸ್ತುಗಳ ವಿರುದ್ದ ನಿರಂತರ ಜಾಗೃತಿ ಅಗತ್ಯ

ಕಲಬುರಗಿ: ಜೂ.26:ಇಂದಿನ ಯುವ ಶಕ್ತಿ ಕಾರಣಾಂತರದಿಂದ ಮಾದಕ ವಸ್ತುಗಳ ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿರುವುದು ತುಂಬಾ ವಿಷಾದನೀಯವಾದ ಸಂಗತಿಯಾಗಿದೆ. ಇದು ಜೀವಕ್ಕೆ ಹಾನಿ ಉಂಟು ಮಾಡುವುದರ ಜೊತೆಗೆ, ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತದೆ. ಇವುಗಳ ಸೇವನೆ, ಸಾಗಣೆ, ಮಾರಾಟ ಮಾಡುವುದು ಅಪರಾಧವಾಗಿದ್ದು, ಅದರ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕು. ನಿಷೇಧಕ್ಕೆ ಕೇವಲ ಕಾಯ್ದೆ-ಕಾನೂಗಳ ಮೂಲಕ ಮಾತ್ರ ಸಾಧ್ಯವಾಗದೆ, ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಮಹಾದೇವ ನಗರದಲ್ಲಿರುವ ‘ಶಿವಾ ವಿದ್ಯಾ ಮಂದಿರ’ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

   ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಮನುಷ್ಯ ಸದಾ ಎಚ್ಚರಿಕೆ ಹೊಂದಿರಬೇಕು. ಇವೆರಡರ ಮೇಲೆ ಪರಿಣಾಮ ಬೀರುವ ಅನೇಕ ಸನ್ನಿವೇಶಗಳು ಮನುಷ್ಯ ಜೀವನದ ಮೇಲೆ ಸಹಜ, ವಿವೇಚನಾಶೀಲನಾಗಿ ವರ್ತಿಸಿ, ಮಾದಕ ವಸ್ತುಗಳಿಂದ ತನ್ನನ್ನು ತಾನು ದೂರವಿರಿಸಿಕೊಳ್ಳುವುದು ಆತನ ಪ್ರಮುಖವಾದ ಕರ್ತವ್ಯವಾಗಿದೆ. ಯುವಕರು ಗಾಂಜಾ, ಭಂಗಿ, ಚರಸ ಮತ್ತು ಮದ್ಯಪಾನ ಸೇವನೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಶೂಚನೀಯವಾಗಿದೆ. ಮಾದಕ ವಸ್ತು ಸೇವನೆ ಜೀವಕ್ಕೆ ಅಪಾಯಕಾರಿಯೆಂದು ತಿಳಿದಿದ್ದರೂ ಕೂಡಾ ಆ ಚಟಕ್ಕೆ ದಾಸರಾಗುತ್ತಿರುವುದು ಇಂದು ಯುವ ಜನಾಂಗ ಅದೋಗತಿಯತ್ತ ಸಾಗುತ್ತಿರುವುದಕ್ಕೆ ಮೂಕಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
 ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ದುಶ್ಚಟಗಳ ಪರಿಣಾಮಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮುಂದೆ ಅವರು ಕೆಟ್ಟ ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ನಿಮ್ಮ ಲಕ್ಷ್ಯ ಯಾವಾಗಲು ಅಧ್ಯಯನದತ್ತ ಇರಬೇಕು. ನಿರ್ದಿಷ್ಟ ಗುರಿಯೊಂದಿಗೆ ನಿರಂತರ ಪ್ರಯತ್ನ ಮಾಡಿ, ಉನ್ನತ ಸಾಧನೆ ಮಾಡಬೇಕು ಎಂದರು.
  ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ಪ್ರಮುಖರಾದ ಸ್ವಾತಿ ಆರ್.ಪವಾಡಶೆಟ್ಟಿ, ನೀಲಕಂಠ ಹಿರೇಮಠ, ಮನೋಹರ ಮಾಲೆ, ದತ್ತಾತ್ರೇಯ ಬಡಗೇರ್, ಸುನೀತಾ ಜಗದಾಪ್, ಅನ್ನಪೂರ್ಣ ಕಾಂತೆ, ಅದಿತಿ, ಆದಿತ್ಯ ಸೇರಿದಂತೆ ಮತ್ತಿತರರು ಇದ್ದರು.