ಕೋಲಾರ,ಏ,೨೮:ಮಾದಕ ವಸ್ತುಗಳಿಗೆ ದಾಸರಾದರೆ ನಿಮ್ಮ ಬದುಕು ನರಕವಾಗುತ್ತದೆ, ಯುವಜನತೆ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಸಮಾಜಕ್ಕೂ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಬೆಂಗಳೂರಿನ ಸೆಂಟ್‌ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರೊ.ಡಾ.ಹಡ್ಸನ್ ಪ್ರದೀಪ್ ಕರೆ ನೀಡಿದರು.
ಕೋಲಾರದ ಬೆಂಗಳೂರು ಉತ್ತರ ವಿವಿಯ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು ಬೆಂಗಳೂರಿನ ಇಂದಿರಾನಗರದ ಮೌಂಟ್‌ಫೋರ್ಟ್ ಕಾಲೇಜಿನಲ್ಲಿ ತಮ್ಮ ಕ್ಷೇತ್ರ ಕಾರ್ಯದ ಭಾಗವಾಗಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಯಾವುದೇ ಸಮಸ್ಯೆಗೆ ಮಾದಕ ವಸ್ತುಗಳು ಪರಿಹಾರವಲ್ಲ ಎಂದ ಅವರು, ಮಾದಕ ವಸ್ತುಗಳ ವ್ಯಸನಕ್ಕೆ ಕಾರಣಗಳು, ಅದರಿಂದಾಗುವ ದುಷ್ಪರಿಣಾಮಗಳು ಮತ್ತು ಪರಿಹಾರೋಪಾಯಗಳ ಕುರಿತು ವಿದ್ಯಾರ್ಥಿಗಳಿಗೆ ಅಮೂಲ್ಯಮಾಹಿತಿ ಒದಗಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿ ಜಿ.ಜೀವನ್‌ಮಾಥ್ಯೂ ಮಾತನಾಡಿ, ಮಾದಕ ವಸ್ತುಗಳ ವ್ಯಸನ ಮನುಷ್ಯನ ಜೀವನದ ದಿಕ್ಕನ್ನೇ ಬದಲಿಸುತ್ತದೆ, ನಿಮ್ಮ ಪ್ರತಿಭೆ, ಜ್ಞಾನ ಕಮರಿ ಹೋಗುತ್ತದೆ, ನೀವು ಅದಕ್ಕೆ ದಾಸರಾದರೆ ಮೊದಲು ಸಮಾಜ,ಕುಟುಂಬ ಮರೆಯುತ್ತೀರಿ ನಂತರ ಮಾರಕ ಕಾಯಿಲೆಗಳಿಗೆ ಬಲಿಯಾಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದು, ನೀವು ಮಾದಕ ವಸ್ತುಗಳಿಂದ ದೂರವಿರಿ, ಸಮಾಜ ಮತ್ತುದೇಶದ ಆಸ್ತಿಯಾಗಲು ನಿಮ್ಮ ಪ್ರತಿಭೆಯನ್ನು ಮೀಸಲಿಡಿ ಎಂದು ಕಿವಿಮಾತು ಹೇಳಿ, ಮಾದಕ ವಸ್ತುಗಳ ಸೇವನೆಯಿಂದಾಗುವ ಅನೇಕ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೌಂಟ್ ಫೋರ್ಟ್ ಕಾಲೇಜಿನ ಪ್ರಾಂಶುಪಾಲ ಬ್ರದರ್ ಡಾ.ವಿಕ್ಟರ್‌ರಾಜ್, ವಿದ್ಯಾರ್ಥಿ ಯುಜನತೆ ಮನಸ್ಸು ಮಾಡಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ, ಮಾದಕ ವಸ್ತುಗಳ ಮಾರಾಟ,ಸೇವನೆ ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ದೂರು ನೀಡಿ, ಅಂತಹ ಮಾರಾಟ ದಂಧೆಯನ್ನು ಮಟ್ಟಹಾಕಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವುದು ಅಷ್ಟೇ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಬರ್ಡ್ಸ್ ಸಂಸ್ಥೆಯ ಬ್ರದರ್ ಜೇಂಸ್ ಆಂಟೋನಿ, ಪ್ರಕ್ರಿಯ ಸಂಸ್ಥೆಯ ಸಿಸ್ಟರ್ ಗ್ರೇಸಿ,ಬೆಂಗಳೂರು ಉತ್ತರ ವಿವಿ ಸಮಾಜ ಕಾರ್ಯ ಉಪನ್ಯಾಸಕ ಪಿ.ಸತೀಶ್ ಮತ್ತಿತರರು ಉಪಸ್ಥಿತರಿದ್ದು, ಪ್ರಶಿಕ್ಷಣಾರ್ಥಿಗಳಾದ ಹಡ್ಸನ್‌ಜಾನ್ ಸ್ಯಾಮ್ಯುಯಲ್, ಡಿ.ಎ.ಸುನೀಲ್‌ಕುಮಾರ್, ಪಿ.ಗಿರಿಶೇಖರ್, ಎಂ.ರೋಜಾ, ಸಿ.ವೆನ್ನಲ ಇದ್ದರು.