ಮಾದಕ ದ್ರವ್ಯ ಸೇವನೆಯನ್ನು ತಳಮಟ್ಟದಿಂದ ತೊಡೆದು ಹಾಕಬೇಕು; ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ

ಸಂಜೆವಾಣಿ ವಾರ್ತೆ

 ದಾವಣಗೆರೆ ಜ.21:   ಮಾದಕ ದ್ರವ್ಯ ಸೇವನೆಯನ್ನು ದೇಶದಲ್ಲಿ ತಳಮಟ್ಟದಿಂದ ತೊಡೆದು ಹಾಕುವ ಪ್ರಯತ್ನ ನಡೆಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್ ಹೆಗಡೆ ತಿಳಿಸಿದರು. ಎಸ್.ಎಸ್ ಮಲ್ಲಿಕಾರ್ಜುನ ನಗರದಲ್ಲಿರುವ ಸರ್ಕಾರಿ ಕನ್ನಡ ಮತ್ತು ಉರ್ದು ಪ್ರೌಢಶಾಲೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ಸೇವನೆ ನಿಷೇಧ ಹಾಗೂ ದುರ್ಬಳಕೆ ಬಗ್ಗೆ ಕಾನೂನು ಅರಿವು ಜಾಗೃತಿ ಜಾಥ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು. ತಂಬಾಕು ಸೇವನೆಯು ಜಾಗತಿಕ ಅಸ್ವಸ್ಥತೆ ಮತ್ತು ಮರಣಕ್ಕೆ ಪ್ರಮುಖ ಕಾರಣ, ಇದರಿಂದ ಪ್ರಸ್ತುತ ಪ್ರತಿ ವರ್ಷ 8 ದಶಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆಗೆ ಯುವ ಜನತೆ ಬಲಿಯಾಗುತ್ತಿದ್ದು, ಯುವಕರ ಜೀವನವೇ ಶೂನ್ಯವಾಗುತ್ತಿದೆ. ಶಾಲಾ ಕಾಲೇಜುಗಳ ಸುತ್ತಲೂ ಗಾಂಜಾ ಸೇವನೆ ಹೆಚ್ಚಾಗಿದ್ದು ಯುವಕರು ಈ ಸೇವನೆಯನ್ನು ಬಹಿಷ್ಕರಿಸಬೇಕು. ಮಾದಕ ವ್ಯಸನಿಗಳಲ್ಲಿ ಶೇ.50ಕ್ಕೂ ಹೆಚ್ಚು 10 ರಿಂದ 20 ವರ್ಷದೊಳಗಿನ ವಿದ್ಯಾರ್ಥಿಗಳೇ ಇದ್ದಾರೆ. ದಿನದಿನಕ್ಕೆ ಕೋರ್ಸುಗಳು, ಪದವಿಗಳು, ತೆಗೆದುಕೊಳ್ಳುವ ಅಂಕಗಳ ಸಂಖ್ಯೆ ಹೆಚ್ಚಾಗುವುದಕ್ಕಿಂತ ವೇಗವಾಗಿ ಮಾದಕದ್ರವ್ಯಗಳ ಚಟಕ್ಕೆ ಬಲಿಯಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಗೆಳೆಯರೊಂದಿಗೆ ಮೋಜಿಗಾಗಿ ಮಾದಕ ವ್ಯಸನವು ಒಬ್ಬರ ಜೀವನವನ್ನೆ ಹಾಳುಮಾಡುತ್ತದೆ. ಡ್ರಗ್ಸ್ ದುರುಪಯೋಗವು ವ್ಯಕ್ತಿಯ ದೇಹಕ್ಕೆ ಹಾನಿಯಾಗುವ ರೀತಿಯಲ್ಲಿ ಔಷಧಿಗಳ ಬಳಕೆಯಲ್ಲೂ ಸೂಚಿಸುತ್ತದೆ. ಮಿತಿಗಿಂತ ಹೆಚ್ಚು ಔಷಧಿಗಳನ್ನು ತೆಗೆದುಕೊಂಡರೆ, ಅವು ದೇಹದಲ್ಲಿ ಋಣಾತ್ಮಕವಾಗಿ ಪರಿಣಾಮ ಬೀರುತತವಲ್ಲದೆ ಜೀವಕ್ಕೆ ದೊಡ್ಡ ಬೆದರಿಕೆಯನ್ನುಂಟು ಮಾಡುತ್ತವೆ. ಇದು ಗಂಭೀರ ಮಾನಸಿಕ ಮತ್ತು ದೈಹಿಕ ಕ್ಷೀಣತೆಗೆ ಕಾರಣವಾಗಿದೆ ಎಂದರು.
   ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ಮಾತಾನಾಡಿ, ತಂಬಾಕಿನಿಂದ ವಿಶ್ವವು ಎದುರಿಸಿದ ಅತಿದೊಡ್ಡ ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ.  ಅತಿ ಹೆಚ್ಚು ಜನರು ತಂಬಾಕು ಸೇವನೆಯಿಂದ ಸಾವುಗಳನ್ನು ಅನುಭವಿಸುತ್ತಿದ್ದಾರೆ. ತಂಬಾಕು ಬಳಕೆಯು ಮನೆಯ ಖರ್ಚು ಹೆಚ್ಚಿಸುತ್ತದೆ. ತಂಬಾಕು ಸಂಬಂಧಿತ ಕಾಯಿಲೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತದೆ. ಧೂಮಪಾನ ಮೂಲಕ ಸುತ್ತಮುತ್ತಲಿನ ಜನರ ಮೇಲದಿದು ಪರಿಣಾಮ ಬೀರುತ್ತದೆ. ತಂಬಾಕಿನಿಂದ ಎಲ್ಲ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ದೊಡ್ಡ ಅಪಾಯವಾಗಿದೆ. ತಂಬಾಕು ಸೇವನೆ ಅಪರಾಧವಲ್ಲ, ತಂಬಾಕು ನಿಷೇಧವು ಕೂಡ ಆಗಿರುವುದಿಲ್ಲ. ಕೆಲವು ಜನರು ತಂಬಾಕು ತಯಾರಿಸಲು ಲೈಸೆನ್ಸ್ ತೆಗೆದುಕೊಂಡಿರುತ್ತಾರೆ. ಮಾದಕವಸ್ತು ಬಳಕೆದಾರರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ಅವರ ಕೌಟುಂಬಿಕ ಜೀವನವನ್ನು ಹಾಳುಮಾಡುತ್ತದೆ. ಸ್ನೇಹಿತರು ಮತ್ತು ಸಮಾಜದೊಂದಿಗೆ ಅವರ ಸಂಬಂಧವು ದಿನದಿಂದ ದಿನಕ್ಕೆ ಕ್ಷೀಣಿಸಲು ಪ್ರಾರಂಭಿಸುತ್ತದೆ. ಇದು ಖಿನ್ನತೆ ಮತ್ತು ಆತಂಕದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವೊಮ್ಮೆ, ಈ ಮಾದಕ ವ್ಯಸನವು ಅನೇಕ ಜನರಿಗೆ ಮಾರಕವಾಗಿದೆ ಮತ್ತು ಅಂತಿಮವಾಗಿ ಒಬ್ಬರ ಜೀವನವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದರು.