ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನಶಿವಮೊಗ್ಗ, ನ. 17:  ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಶಿಸ್ತು ನೀಡುವ ಮೂಲಕ ಅವರ ಜೀವನಕ್ಕೆ ಭದ್ರ ಬುನಾದಿ ಹಾಕಿದಲ್ಲಿ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ನಾವೆಲ್ಲ ಕಾರ್ಯೋನ್ಮುಖರಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನುಡಿದರು. ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನ-2021 ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.     ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಅಡಿಪಾಯ ತುಂಬ ಸದೃಢವಾಗಿರಬೇಕು. ಅವರಿಗೆ ಉತ್ತಮ ಸಾಮಾಜಿಕ ವಾತಾವರಣ, ಶಿಕ್ಷಣ, ಆರೋಗ್ಯ ಒದಗಿಸಬೇಕು. ಆಗ ಇಡೀ ಕುಟುಂಬ, ಸಮಾಜದ ಬೆಳವಣಿಗೆ ಸಾಧ್ಯ. ಹಾಗೂ ವಿದ್ಯಾರ್ಥಿಗಳು ಕೂಡ ಶಿಸ್ತು ಮತ್ತು ಪರಿಶ್ರಮದಿಂದ ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.    ಕಾರ್ಯಕ್ರಮದಲ್ಲಿ ಮನೋತಜ್ಞ ಡಾ.ಅರವಿಂದ್ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಾಗೂ ಇದೇ ವೇಳೆ ಮಾದಕ ದ್ರವ್ಯ ವ್ಯಸನ ಹೇಗೆ ಇಡೀ ಕುಟುಂಬವನ್ನು ತೊಂದರೆಗೀಡು ಮಾಡುತ್ತದೆ ಎಂಬ ವಿಡಿಯೋ ತುಣುಕುಗಳನ್ನು  ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಎಎಸ್‍ಪಿ ಹೆಚ್.ಟಿ.ಶೇಖರ್, ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ, ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.


Attachments areaReplyReply to allForward