ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.05 : ಪಟ್ಟಣದ ಜಿಬಿಆರ್ ಪದವಿಪೂರ್ವ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಶ್ರೀನಿವಾಸ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿ ತಳಕಲ್ ವೀರೇಶ, ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಕರೇ ಹೆಚ್ಚು ಮಾದಕ ದ್ರವ್ಯಗಳ ವ್ಯಸನಿಗಳಾಗಿರುವುದು ವಿಷಾದದ ಸಂಗತಿ. ಜಾಗತಿಕವಾಗಿ ಮಾದಕ ದ್ರವ್ಯ ವ್ಯಸನಿಗಳ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸರ್ಕಾರಗಳು ಮಾದಕ ದ್ರವ್ಯ ವಿರೋದಿ ಕಾಯಿದೆಗಳನ್ನು ಜಾರಿಗೊಳಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಯುವಕರು ಎಲ್ಲೆಂದರಲ್ಲಿ ಬೀದಿ ಬದಿಗಳಲ್ಲಿನ ರಸಾಯನಿಕ ಮಿಶ್ರಿತ ಫಾಸ್ಟ್ ಫುಡ್‍ಗಳಿಗೆ ಮೊರೆ ಹೋಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಯುವಕರು ದುಶ್ಚಟಗಳನ್ನು ತ್ಯಜಿಸಿ ಸುಖೀ ಜೀವನ ನಡೆಸಬೇಕು. ನಿತ್ಯದ ದಿನಚರಿಯಲ್ಲಿ ಯೋಗ, ಪ್ರಾಣಾಯಾಮ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಂಸ್ಥೆಯ ಅಧಿಕಾರಿ ರಂಜನಾ, ಉಪನ್ಯಾಸಕರಾದ ಎಂಪಿಎಂ.ಶಿವಪ್ರಕಾಶ, ಚಂದ್ರಶೇಖರಯ್ಯ, ಬಸವಲಿಂಗಯ್ಯ ಹಾಗೂ ಇತರರಿದ್ದರು.