ಮಾದಕ ದ್ರವ್ಯ ಪತ್ತೆಯಲ್ಲಿ ಕೋಲಾರಕ್ಕೆ 3ನೇ ಸ್ಥಾನ

ಕೋಲಾರ, ಸೆ,೨೨-ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಣೆ ತಡೆಯಲು ಸೂಕ್ತ ಕ್ರಮ ರಾಜ್ಯದಲ್ಲಿ ಮಾದಕ ದ್ರವ್ಯ ಗಾಂಜಾ, ಪ್ರಕರಣಗಳನ್ನು ಭೇದಿಸುವಲ್ಲಿ ನಮ್ಮ ಜಿಲ್ಲೆ ೩ನೇ ಸ್ಥಾನದಲ್ಲಿದ್ದು, ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಣೆ ತಡೆಯಲು ಸೂಕ್ತ ಕ್ರಮಗಳನ್ನು ಅನುಸರಿಸಿ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಮಾದಕ ದ್ರವ್ಯ ಸಾಗಣೆಯನ್ನು ತಡೆಯಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ, ಜಿಲ್ಲೆಯಲ್ಲಿರುವ ಎಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಂಬಂಧಿಸಿದ ನಗರ ಪ್ರದೇಶದಲ್ಲಿರುವ ಹಾಸ್ಟೆಲ್ ಗಳಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಚಿಲ್ಲರೆ ಮೆಡಿಕಲ್ ಶಾಪ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಗಣಕೀಕೃತ ಬಿಲ್ಲಿಂಗ್‌ನ ಸ್ಥಿತಿಯನ್ನು ಪರಿಶೀಲಿಸಬೇಕು ಎಂದರು
ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಾಂತರಾಜು ಅವರು ಮಾತನಾಡಿ, ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಶಿಬಿರಗಳನ್ನು ಸಾಮೂಹಿಕವಾಗಿ ಹಮ್ಮಿಕೊಳ್ಳುವುದು ಹಾಗೂ ಎಲ್ಲ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಗಳನ್ನು ತಪಾಸಣೆ ಮಾಡುವುದರಿಂದ ವಿದ್ಯಾರ್ಥಿಗಳ ಚಲನವನಗಳು ಕಂಡುಬರುತ್ತದೆ ಎಂದರು.
ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್ ನಲ್ಲಿ ಓಡಾಡುವುದನ್ನು ಪರಿಶೀಲಿಸಬೇಕೆಂದು ಶಿಕ್ಷಣ ಇಲಾಖೆಯವರಿಗೆ ಸೂಚಿಸಿದರು.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ ನಾರಾಯಣ್ ಅವರು ಮಾತನಾಡಿ,ಜಿಲ್ಲೆಯು ಗಡಿ ಭಾಗದಲ್ಲಿರುವುದರಿಂದ ಮಾದಕ ದ್ರವ್ಯ ಮಾರಾಟ ಸರಬರಾಜನ್ನು ತಡೆಯಲು ಮತ್ತು ಮಾದಕ ದ್ರವ್ಯಗಳ ಅಪಾಯಕಾರಿ ವ್ಯಾಪಾರದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಆರ್ ಟಿ ಓ ಅವರ ಸಹಕಾರ ಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಹಳೆಯ ಮಾದಕ ದ್ರವ್ಯ ಪ್ರಕರಣಗಳಲ್ಲಿ ದಾಖಲಾಗಿರುವ ವ್ಯಕ್ತಿಗಳನ್ನು ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆಯವರಿಗೆ ಹೇಳಿದರು.
ಜಿಲ್ಲೆಯಲ್ಲಿರುವ ಎಲ್ಲ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೂ ಹಾಗೂ ಮೆಡಿಕಲ್ ಶಾಪ್ ಅಂಗಡಿದಾರರಿಗೆ ಜಾಗೃತಿ ಮೂಡಿಸ ಬೇಕೆಂದರು.
ಮಾದಕ ವಸ್ತುಗಳ ದುಷ್ಪರಿಣಾಮದಿಂದ ಯುವಕರನ್ನು ರಕ್ಷಿಸಲು ಜಿಲ್ಲಾಡಳಿತದಿಂದ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಇಲಾಖೆಗಳಿಗೆ ಭರವಸೆ ನೀಡಿದರು.
ಸಭೆಯಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಜಗದೀಶ್, ಅಬಕಾರಿ ಉಪ ಆಯುಕ್ತರು ರಮೇಶ್ ಕುಮಾರ್, ಆರ್ ಟಿ ಓ ಅಧಿಕಾರಿಯಾಗಿ ಯೋಮಕೇಶವ್, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ರಾಮಚಂದ್ರಪ್ಪ, ಸಾರ್ವಜನಿಕ ಅಭಿಯೋಜಕ ವಕೀಲರಾದ ನಿರ್ಮಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.