ಮಾದಕ ದ್ರವ್ಯ ಅಕ್ರಮ ಸಾಗಣೆ ಎನ್‌ಐಎ ದಾಳಿ

ಚೆಂಗಲ್ಪಟ್ಟು,ಆ. ೬- ಭಾರತ ಮತ್ತು ಶ್ರೀಲಂಕಾಕ್ಕೆ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಚೆಂಗಲ್ಪಟ್ಟು ಜಿಲ್ಲೆಯಲ್ಲಿ ೨೨ ಕಡೆ ಏಕಕಾಲಕ್ಕೆ ಶೋಧ ನಡೆಸಿದೆ.

ಪಾಕಿಸ್ತಾನ ಮೂಲದ ಪೂರೈಕೆದಾರರೊಂದಿಗೆ ಕೆಲಸ ಮಾಡುವ ಶ್ರೀಲಂಕಾದ ಡ್ರಗ್ ಮಾಫಿಯಾದ ಶಂಕಿತ ಚಟುವಟಿಕೆಗಳಿಗೆ ಸಂಬಂಧಿಸಿದ್ದು ಈ ವೇಳೆ ಪ್ರಮಾಣದ ಶಸ್ತ್ರಾಸ್ತ್ರಗಳು, ಗ್ಯಾಜೆಟ್ ಹಾಗು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ೨೨ ಸ್ಥಳಗಲ್ಲಿ ಶಂಕಿತರ ನಿವಾಸಗಳ ಮೇಲೆ ಎನ್ ಐಎ ಅಧಿಕಾರಿಗಳು ಶೋಧ ನಡೆಸಿದ್ದು. ಅಪಾರ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನ ಮೂಲದ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರರ ಜತೆ ಸೇರಿಕೊಂಡು ಮೂವರು ಆರೋಪಿಗಳು ಅಕ್ರಮ ಚಟುವಟಿಕೆಗಳನ್ನು ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ಪ್ರಮುಖವಾಗಿ ಸಿ ಗುಣಶೇಖರನ್ ಅಲಿಯಾಸ್ ಗುಣ ಮತ್ತು ಪುಷ್ಪರಾಜ ಅಲಿಯಾಸ್ ಪೂಕುಟ್ಟಿ ಮಾದಕ ವಸ್ತು ಜಾಲ ನಿಯಂತ್ರಿಸುತ್ತಿದ್ದು. ಪಾಕಿಸ್ತಾನ ಮೂಲದ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರ ಹಾಜಿ ಸಲೀಂ ಸಹಯೋಗದಲ್ಲಿ ಜಾಲ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಡ್ರಗ್ಸ್ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರು ಭಾರತ ಮತ್ತು ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಎಲ್‌ಟಿಟಿಇ ಪುನರುಜ್ಜೀವನಕ್ಕಾಗಿ ಮತ್ತು ಅದರ ಹಿಂಸಾತ್ಮಕ ಚಟುವಟಿಕೆಗಳನ್ನು ಮುಂದುವರೆಸಲು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜುಲೈ ೮ ರಂದು ಎನ್‌ಐಎ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಶೋಧ ನಡೆಸಲಾಗಿದೆ.
ಕ್ರಿಮಿನಲ್ ಪಿತೂರಿ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ ಇತ್ಯಾದಿಗಳ ಅಡಿಯಲ್ಲಿ ಬರುವ ಗಂಭೀರ ಅಪರಾಧಗಳನ್ನು ಒಳಗೊಂಡಿರುವ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.