ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

ವಿಜಯಪುರ,ಜ.28:ಜಿಲ್ಲೆಯ ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ದಿನಾರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವೀಂದ್ರ ಬೆಳ್ಳಿ, ಪ್ರಜಾಪ್ರಭುತ್ವವು ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ವ್ಯವಸ್ಥೆಯಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನು ಕೊಡಲಾಗಿದೆ. ಮತದಾನದ ಹಕ್ಕಿನ ಮೂಲಕ ತಮ್ಮ ಪ್ರತಿನಿಧಿಯನ್ನು ಚುನಾಯಿಸುವ ಅಧಿಕಾರ ಪ್ರಜೆಗಳಿಗಿದೆ. ಪ್ರತಿಯೊಬ್ಬರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಬೇಕೆಂದರು. ಮಕ್ಕಳು ಕೃಷಿಯಲ್ಲಿ ಆಗುವ ಆಧುನಿಕ ಆವಿಷ್ಕಾರಗಳ ಮಾಹಿತಿ ಪಡೆದು ಮುಂದೆ ಕೃಷಿ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಇನ್ನೋರ್ವ ಪಾಲಕ ವಿಲಾಸ ಲಮಾಣಿ ಮಾತನಾಡಿ, ದೇಶದೆಲ್ಲೆಡೆ ಬಡತನ, ನಿರುದ್ಯೋಗ, ಬ್ರಷ್ಠಾಚಾರ ತಾಂಡವವಾಡುತ್ತಿದೆ. ಶಿಕ್ಷಣ ಕೇವಲ ಶ್ರೀಮಂತರಿಗೆ ಸಿಗುತ್ತಿದೆ. ಈ ತಾರತಮ್ಯ ಹೋಗಲಾಡಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗಿದೆ ಎಂದರು.

ಶಾಲಾ ಚಿಣ್ಣರು ಗಾಂದೀಜಿ, ಡಾ. ಅಂಬೇಡ್ಕರ, ಸುಭಾಷಚಂದ್ರ ಬೋಸ್, ಅಕ್ಕಮಹಾದೇವಿ, ಸಂಗೊಳ್ಳಿ ರಾಯಣ್ಣ, ಭಾರತಾಂಬೆ, ವೀರವನಿತೆÉ ಓಬವ್ವ, ಶ್ರೀರಾಮ, ಸೀತೆ ಇತ್ಯಾದಿ ವೇಷ ಭೂಷಣಗಳಿಂದ ಅಲಂಕೃತಗೊಂಡಿದ್ದರು.

ಕಾರ್ಯಕ್ರಮ ಅಂಗವಾಗಿ ಭಾಷಣ ಸ್ಪರ್ಧೆ, ನೃತ್ಯ ಮತ್ತು ದೇಶ ಭಕ್ತಿಗೀತೆಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕೆ. ಎಲ್. ದಶವಂತ, ವಿಜಯಕುಮಾರ ಸಿ, ಮುಖ್ಯ ಗುರುಮಾತೆ ನಿವೇದಿತಾ ರೂಡಗಿ, ಶಿಕ್ಷಕಿಯರಾದ ರೇಣುಕಾ ಗುಣಕಿ, ಚೈತ್ರಾ ಗುಳೇದಗುಡ್ಡ, ರಜಿಯಾಬಾನು ಬಿಳೆಕುದರಿ, ಕೀರ್ತಿ ಚಿಮ್ಮಲಗಿ, ರೂಪಾ ಪಟ್ಟಣಶೆಟ್ಟಿ, ಕಾಶಿಬಾಯಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.