ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ “ಮಾತೃಶಕ್ತಿ ಪುರಸ್ಕಾರ”

ಕಲಬುರಗಿ:ಮಾ.19: ಶರಣರ ನಾಡಾದ ಕಲಬುರಗಿಯ ಅಪಾರ ಭಕ್ತ ಸಮೂಹಕ್ಕೆ “ಅವ್ವಾಜಿ” ಎಂದೇ ಜನಜನಿತರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ, ಮಹಾರಾಷ್ಟ್ರದ ಸೋಲ್ಲಾಪುರದ ಶ್ರೀ ಶ್ರೀ ಶ್ರೀ ಸದ್ಗುರು ಬಸವಾರೂಢ ಮಹಾಸ್ವಾಮೀಜಿ ಮಠ ಟ್ರಸ್ಟ್ ವತಿಯಿಂದ, ಶ್ರೀಯಂತ್ರ ಕೋಟಿ ಕುಂಕುಮಾರ್ಚನ ಉತ್ಸವ ನಿಮಿತ್ಯ “ಮಾತೃಶಕ್ತಿ ಪುರಸ್ಕಾರ-2023” ನೀಡಿ ಗೌರವಿಸಲಾಯಿತು.
ಬೀದರ ಜಿಲ್ಲೆಯ ವಡಗಾಂವ ಗ್ರಾಮದ ದೇಶಮುಖ ಮನೆತನದಲ್ಲಿ ಹುಟ್ಟಿ, ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಮೊಮ್ಮಗಳಾಗಿ, ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಧರ್ಮಪತ್ನಿಯಾಗಿ, ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ತಾಯಿಯಾಗಿರುವ, ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು, ಶರಣ ಪರಂಪರೆಯಂತೆ ಕಾರ್ಯಗಳನ್ನು ಮಾಡುತ್ತಾ, ಬಸವಾನುಯಾಯಿಯಾಗಿ, ಬಸವಾದಿ ಶರಣರ ಕಾಯಕದಂತೆ ಬಡವರಿಗೆ, ದೀನ ದಲಿತರಿಗೆ ಕೈತುತ್ತು ನೀಡಿ, ಅನ್ನದಾಸೋಹ ಮಾಡಿ, ಕಡುಬಡವರಿಗೆ ಉಚಿತ ಶಿಕ್ಷಣ ನೀಡಿ, ಜ್ಞಾನ ದಾಸೋಹ ಮಾಡಿ, ವಿಧವೆಯರಿಗೆ ಆಸರೆಯಾಗಿರುವ ಅವರು, ಕೋವಿಡ್‍ನಂತಹ ಕಠಿಣ ಸಮಯದಲ್ಲಿ ಸ್ವತ: ಎಲ್ಲರಿಗೂ ಆಹಾರ ಪೊಟ್ಟಣಗಳನ್ನು ತಯಾರಿಸಿ ಬಡವರಿಗೆ ಸರಬರಾಜು ಮಾಡಿ ಅನ್ನದಾಸೋಹ ಮಾಡಿದರು.
ಸ್ವತ: ಕವಿಯಿತ್ರಿಯಾದ ಅವ್ವಾಜಿಯವರು ಅನೇಕ ಕಥೆ, ಕವನ, ಕಾದಂಬರಿಗಳಿಗೆ ಸಂಪಾದಕರಾಗಿ ಪ್ರೋತ್ಸಾಹಿಸಿದ್ದಾರೆ. ಪೂಜ್ಯ ಡಾ. ಅಪ್ಪಾಜಿಯವರು ಪ್ರಾರಂಭಿಸಿದ ಪ್ರತಿಷ್ಠೆಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ನೂರಾರು ಜನರಿಗೆ ಕೆಲಸ ಕೊಟ್ಟಿದ್ದಾರೆ. ಮಹಿಳೆಯರು ಸ್ವಾವಲಂಬಿಯಾಗಲು ಸಹಾಯ ಮಾಡಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಅವರು, ಸಿದ್ದಗಂಗಾ ಮಠದ ವತಿಯಿಂದ ಕಲ್ಯಾಣರತ್ನ ಪುರಸ್ಕಾರ, ನೇಪಾಳದ ಅಂತರರಾಷ್ಟ್ರೀಯ ಬಸವ ಸಮಿತಿ ವತಿಯಿಂದ ಅಂತರರಾಷ್ಟ್ರೀಯ ದಾಸೋಹ ರತ್ನ ಪ್ರಶಸ್ತಿ ಪಡೆದಿದ್ದಾರೆ.
ಇವೆಲ್ಲವೂಗಳನ್ನು ಪರಿಗಣಿಸಿ ಅಸಂಖ್ಯ ಭಕ್ತ ಸಮೂಹಕ್ಕೆ ನಮ್ಮ ಅವ್ವಾಜಿ ಎಂದೇ ಖ್ಯಾತರಾದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ “ಮಾತೃಶಕ್ತಿ ಪುರಸ್ಕಾರ-2023” ನೀಡಿ ಗೌರವಿಸಲಾಗಿದೆ ಎಂದು ಶ್ರೀ ಶ್ರೀ ಶ್ರೀ ಸದ್ಗುರು ಬಸವಾರೂಢ ಮಹಾಸ್ವಾಮೀಜಿ ಮಠ ಟ್ರಸ್ಟ್‍ನ ಶ್ರೀ ಶಿವಪುತ್ರ ಮಹಾಸ್ವಾಮಿಜೀಗಳು ತಿಳಿಸಿದರು.
ಈ ಸಮಾರಂಭದಲ್ಲಿ ಶರಣಬಸವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಉಪಸ್ಥಿತರಿದ್ದರು.