
ಕಲಬುರಗಿ.ಮಾ.02: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು ಇಡೀ ಹೆಣ್ಣು ಸಂಕುಲಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ ಎಂದು ಸಮಾಜ ಸೇವಕಿ ಶ್ರೀಮತಿ ಲಕ್ಷ್ಮೀ ಪಾಟೀಲ ರೇವೂರ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ಇಂಜಿನಿಯರಿಂಗ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ತ್ರೀ-ಪುರುಷರು ಸಮಾನವಾಗಿ ಕೆಲಸ ಮಾಡಬೇಕು ಇಂದು ಮಹಿಳೆ ಯುದ್ಧದಲ್ಲಿ, ಕ್ರೀಡೆಯಲ್ಲಿ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಮಂಚುಣಿಯಲ್ಲಿದ್ದಾಳೆ ಹಾಗೂ ಇಂದು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವುದು ಸಂತೋಷದ ವಿಷಯ. ಮಹಿಳೆಗೆ ಬಹಳ ಜವಬ್ದಾರಿಗಳಿರುತ್ತವೆ. ಮಹಿಳೆ ಆರ್ಥಿಕವಾಗಿ ಬಲಿಷ್ಠಗೊಂಡರೆ ಸುಂದರ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀಮತಿ ಸಾವಿತ್ರಿ ಶರಣು ಸಲಗರ ಮಾತನಾಡಿ, ಯಶಸ್ವಿ ಪುರುಷನ ಹಿಂದೆ ಹೇಗೆ ಮಹಿಳೆ ಇರುತ್ತಾಳೆಯೋ ಹಾಗೇ ಯಶಸ್ವಿ ಮಹಿಳೆಯ ಹಿಂದೆ ಪುರುಷನಿರುತ್ತಾನೆ. ನಾನು ಸಣ್ಣ ಹಳ್ಳಿಯ ಬಡ ಕುಟುಂಬದಿಂದ ಬಂದು ಇಂದು ಕೆಎಎಸ್ ಪಾಸ ಮಾಡಿ ಅಧಿಕಾರಿಯಾಗಿದ್ದೇನೆ. ಹೆಣ್ಣು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಯಾವಾಗಲೂ ತಂದೆ ತಾಯಿಗಳಿಗೆ ಎರಡು ಕಣ್ಣುಗಳ ಹಾಗೆ ನೋಡಿಕೊಳ್ಳಿ ಹಾಗೂ ಹೆಣ್ಣು ದೀಪವಿದ್ದಂತೆ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಕರೆ ನೀಡಿದರು.
ಯಾವಾಗಲೂ ದೇಶಕ್ಕಾಗಿ ದುಡಿಯಬೇಕು ಆಗತಾನೆ ನವಭಾರತದೆಡೆಗೆ ಮುನ್ನುಗ್ಗಲು ಸಾಧ್ಯ ಎಂದರು. ಕಿತ್ತೂರ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ ಹಾಗೂ ಕಲ್ಪನಾ ಚಾವ್ಲಾ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನಿಸಲಾಯಿತು.
ಡಾ. ರಾಜಶ್ರೀ ರೆಡ್ಡಿ, ಶ್ರೀಮತಿ ಸೋನಾ ಕೋಣಿನ್ ಹಾಗೂ ಶ್ರೀಮತಿ ಗೀತಾ ಚೆನ್ನಾರೆಡ್ಡಿಯವರಿಗೆ ಸ್ತ್ರೀ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಮತಿ ಅನ್ನಪೂರ್ಣ ಸಂಗೋಳಗಿ, ಡಾ. ಗೀತಾ ಪಾಟೀಲರವರಿಗೆ ಸ್ತ್ರೀ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಮತಿ ಶಾಂತಾಬಾಯಿ ಪತ್ತಾರ ಅವರಿಗೆ ವೀರ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಮತಿ ಶಾರದಾ ರಾಂಪುರೆಯವರನ್ನು ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಂಗ್ ಇನ್ನೋವೆಟರ್ ಪ್ರಶಸ್ತಿಯನ್ನು ಕು. ವಿಜಯಲಕ್ಷ್ಮೀ ಬಿರಾದರ ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಶ್ರೀಮತಿ ಪೂಜಾ ಅಯೇರಿ ಹಾಗೂ ಪ್ರಶಸ್ತಿ ಪಡೆದವರಲ್ಲಿ ಕೆಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ವಿ ನಿಷ್ಠಿ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವಿ ಡಿ ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಸೇರಿದಂತೆ ಇತರರಿದ್ದರು. ಕಾರ್ಯಕ್ರಮವನ್ನು ಪ್ರೊ. ಶೃತಿ ಮತ್ತು ಅಭಿಲಾಷಾ ನಿರೂಪಣೆಗೈದರು. ಸಂಗೀತ ವಿಭಾಗದವರು ಪ್ರಾರ್ಥಿಸಿದರೆ, ವಿವಿಯ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಸ್ವಾಗತಿಸಿದರು. ಪ್ರೊ. ಅಮೃತ ವಂದಿಸಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದ ಮೆಟ್ಟಿಲುಗಳು ರಂಗೋಲಿಯಲ್ಲಿ ಮಿಂದು ಜಗಮಗಿಸುತ್ತಿದ್ದವು. ಮಹಿಳಾ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಬಣ್ಣ ಬಣ್ಣದ ಸೀರೆಯುಟ್ಟು ಕಂಗೊಳಿಸುತ್ತಿದ್ದರು. ಪರಸ್ಪರ ಕೈ ಕುಲುಕಿ ಮಹಿಳಾ ದಿನಾಚರಣೆಯ ಶುಭಾಷಯ ಹೇಳುತ್ತಿದ್ದರು. ಎಲ್ಲಂದರಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸುವುದು ಸಾಮಾನ್ಯವಾಗಿತ್ತು. ಅದೊಂದು ಹಬ್ಬದ ವಾತಾವರಣ. ಎಲ್ಲಾ ಕಡೆ ಹೆಣ್ಣು ಮಕ್ಕಳದ್ದೇ ಕಲರವ, ಮಂದಹಾಸ ಬೀರಿ ಖುಷಿ ಖುಷಿಯಾಗಿದ್ದ ಮಹಿಳೆಯರು. ಮಾತೋಶ್ರೀ ಗೋದುತಾಯಿ ಅವ್ವಾಜಿ ಹಾಗೂ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು ಸೇರಿದಂತೆ ಜೀವನದಲ್ಲಿ ಸಾಧನೆಗೈದ ಮಹಿಳೆಯರ ಭಿತ್ತಿ ಚಿತ್ರಗಳು ರಾರಾಜಿಸುತ್ತಿದ್ದವು. ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಹೂವು, ಬಳೆ, ಮೂಗುತಿ ಕೊಟ್ಟು ಹಣೆಗೆ ಅರಿಶಿನ ಕುಂಕುಮವಿಟ್ಟು ಸಂಪ್ರದಾಯದಂತೆ ಬರಮಾಡಿಕೊಳ್ಳಲಾಗುತ್ತಿತ್ತು. ಇದೆಲ್ಲವೂ ನಡೆದದ್ದೂ ಶರಣಬಸವ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ.