
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.07: ಕೆಲ ಕನ್ನಡ ಸಾಹಿತಿಗಳು ಕನ್ನಡ ಬೆಳವಣೆಗಾಗಿ ಹೋರಾಟ ಮಾಡುವವರೇ ತಮ್ಮ ಮಕ್ಕಳನ್ನು ಇಂಗ್ಲೀಷ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಿರುವದು ಖೇದಕರ ಸಂಗತಿ. ಯಾವುದೇ ಭಾಷೆಯನ್ನು ವಿರೋಧಿಸುವ ಮನೋಭಾವ ನಮ್ಮಲ್ಲಿರಬಾರದು. ಆದರೆ ನಮ್ಮ ಮಾತೃ ಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಹಾಸ್ಯ ಭಾಷಣಕಾರ ಬಿ. ಪ್ರಾಣೇಶ ಹೇಳಿದರು.
ನಗರದ ಸರಕಾರಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಆರಂಭವಾದ 8ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಾಣೇಶ, ನಾರಿನಾಳ ಗುರುಗಳ ಮತ್ತು ನನ್ನ ಸಂಬಂಧ ಸಹೋರತ್ವ ಮೀರಿದ್ದು. ಹೀಗಾಗಿ ಅವರು ನಮಗೆ ಮಾರ್ಗದರ್ಶಕರು.ಗಂಗಾವತಿಯಂತ ಸಣ ನಗರದಲ್ಲಿ ಈ ಮೊದಲು ಸಾಹಿತ್ಯ ವಾತಾವರಣ ಇರಲಿಲ್ಲ. ಸಾಹಿತ್ಯದ ಕಾರ್ಯಕ್ರಮ ಆಯೋಜಿಸಲು ಬೆಂಗಳೂರಿನಿಂದ ಜನರನ್ನು ಕರೆತರುವ ಕಾಲ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಗಂಗಾವತಿಯಂತ ನಗರದಲ್ಲಿ ಅಮೂಲಾಗ್ರ ಬದಲಾವಣೆಯಾಗಿದ್ದು ಸಾಹಿತ್ಯದ ಪ್ರಖರ ಹೊನಲು ಹರಿಯುತ್ತಿದೆ ಎಂದರು.
ವೇದಿಕೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಕನ್ನಡ ನಾಡು ನುಡಿ, ನೆಲ, ಜಲದ ಉಳಿವಿಗಾಗಿ ಎಲ್ಲರೂ ಶ್ರಮಿಸುವುದು ಅಗತ್ಯವಿದೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ, ಅನ್ಯ ಭಾಷೆಗಳ ಬಗ್ಗೆ ಗೌರವ ಪ್ರೀತಿ ಹೊಂದಬೇಕು. ಇಂತಹ ಸಮ್ಮೇಳನಗಳು ಸಂಸ್ಕೃತಿ ಮತ್ತು ಸಾಹಿತ್ಯವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಶಾಸಕ ಬಸವರಾಜ್ ದಡೆಸ್ಗೂರ್ ಮಾತನಾಡಿ ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನಮಗೆ ಬದುಕಲು ಹಲವು ಭಾಷೆ ಬೇಕು ಆದರೆ ಪ್ರೀತಿಸಲು ಕನ್ನಡವೇ ಬೇಕು.ಕನ್ನಡಿಗರೆಲ್ಲರು ತಮ್ಮ ಮಕ್ಕಳನ್ನು ಕನ್ನಡ ಮಾದ್ಯಮದಲ್ಲಿ ಶಿಕ್ಷಣ ಕೊಡಿಸಿದಾಗ ಮಾತ್ರ ಕನ್ನಡಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದರು.
ಕಸಾಪದ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ನಿಕಟಪೂರ್ವ ಅಧ್ಯಕ್ಷೆ ಡಾ. ಮುಮ್ತಾಜ್ ಬೇಗಂ ಇತರರು ಮಾತನಾಡಿದರು.