ಮಾತೃ-ಪಿತೃ ವಂದನಾ’ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು 

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೨೫: ವೃದ್ಧಾಪ್ಯದಲ್ಲಿ ಮಕ್ಕಳು ತಂದೆ-ತಾಯಿಯರನ್ನು ಪ್ರೀತಿಯಿಂದ ನೋಡಿಸುವ ಅವರ ಬದುಕಿಗೆ ಆಸರೆಯಾಗಬೇಕೆಂದು ಆರ್‌ಜಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಜನಹಳ್ಳಿ ಜಿ.ಶ್ರೀನಿವಾಸಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪ್ರಶಾಂತಿ ಸಭಾಂಗಣದಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಅವರ ಪೋಷಕರಿಗೆ ಪಾದಪೂಜೆ ನೇರವೇರಿಸುವ ‘ಮಾತಾ-ಪಿತೃ ವಂದನಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಪೋಷಕರಿಗೆ ಪಾದಪೂಜೆ ನೆರವೇರಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ಈಶ್ವರಮ್ಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಈ ಅದೃಷ್ಟ ದೊರೆತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇದೊಂದು ಜೀವನದ ತಿರುವಿನಂಶವಾಗಿದೆ ಎಂದರು.ಪೋಷಕರು ಮಕ್ಕಳಿಗೆ ಒತ್ತಡ ಹೇರದೆ, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರದಲ್ಲಿ ಮುಂದುವರೆದು ಸಾಧಿಸಲು ಪ್ರೋತ್ಸಾಹಿಸಬೇಕು. ಮಕ್ಕಳು ಎಷ್ಟೇ ಹಣ ಗಳಿಸಿದರೂ, ತಂದೆ-ತಾಯಿಯರಿಗೆ ವೃದ್ಧಾಪ್ಯದಲ್ಲಿ ಪ್ರೀತಿಯ ಆಸರೆಯಾಗಿರಬೇಕು. ಅವರಿಗೆ ಊರುಗೋಲಿನ ಅವಶ್ಯಕತೆ ಬೀಳದಂತೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದರು.ವಾಸವಿ ಮಹಿಳಾ ಮತ್ತು ಯುವತಿಯರ ಸಂಘದ ಅಧ್ಯಕ್ಷೆ ಹೇಮಾ ಶ್ರೀನಿವಾಸ ಮಾತನಾಡಿ, ಮಕ್ಕಳು ತಪ್ಪು ಮಾಡುವುದು ಸಹಜ. ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಗಳ ಪಾದಕ್ಕೆ ನಮಸ್ಕರಿಸಿ, ಕ್ಷಮೆ ಕೋರುವುದು ವಿಭನ್ನವಾಗಿದೆ. ನಮಸ್ಕಾರ ಎನ್ನುವುದು ತಪ್ಪಿಗೆ ವಿರಾಮವಾಗಬೇಕು; ಪುನರಾವರ್ತನೆಯಾಗಬಾರದು. ಮಕ್ಕಳು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು, ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂಬುದು ಪ್ರತಿಯೊಬ್ಬ ತಂದೆ-ತಾಯಿಯರ ಆಸೆಯಾಗಿರುತ್ತದೆ. ಮಕ್ಕಳು ಸಂಸ್ಕಾರವAತರಾಗಿ ಪೋಷಕರ ಆಸೆಯನ್ನು ನೇರವೇರಿಸಬೇಕೆಂದು ಸಲಹೆ ನೀಡಿದರು. ಈಶ್ವರಮ್ಮ ಶಾಲಾಡಳಿತ ಮಂಡಳಿ ಸದಸ್ಯೆ ಕೆ.ವಿ.ಸುಜಾತ ಮಾತನಾಡಿ, ಅಮ್ಮನ ಮಮತೆ ಆಕಾಶದಷ್ಟು ವಿಶಾಲ. ಅಪ್ಪನ ಉದಾರತೆ ಆಕಾಶದಲ್ಲಿ ಮಿನುಗುವ ಲೆಕ್ಕವಿರದಷ್ಟು ನಕ್ಷತ್ರಗಳಿದ್ದಂತೆ. ಪುರಾಣ ಕಾಲದಿಂದ ತಂದೆ-ತಾಯಿಯರ ಹೆಸರಿಸಿನ ಜೊತೆಗೆ ಮಹಾತ್ಮರ ಹೆಸರನ್ನು ಸೇರಿಸಿ, ಹೇಳುವುದನ್ನು ಕೇಳಿದ್ದೇವೆ. ಆದ್ದರಿಂದ ತಂದೆ-ತಾಯಿಯರಿಗೆ ಗೌರವಿಸಿ, ಒಳ್ಳೆಯ ಕೆಲಸ ಮಾಡಬೇಕೆಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷೆ ಕೆ.ಆರ್.ಸುಜಾತ ಕೃಷ್ಣ, ಶಾಲೆಯ ಸಂಸ್ಥಾಪಕರಾದ ಮಾತೃಸ್ವರೂಪಿಗಳಾದ ಬಿ.ಆರ್.ಶಾಂತಕುಮಾರಿಯವರ ಆದರ್ಶಗಳು ನಮ್ಮೆಲ್ಲರಲ್ಲಿ ಮೇಳೈಸಿವೆ. ಯಾರು ತಂದೆ-ತಾಯಿಗಳನ್ನು ಗೌರವಿಸುತ್ತಾರೋ, ಅವರನ್ನು ಎಲ್ಲರೂ ಗೌರವಿಸುತ್ತಾರೆ. ನಿಸ್ವಾರ್ಥ ಪ್ರೇಮವನ್ನು ತಂದೆ-ತಾಯಿಗಳಲ್ಲಿ ಮಾತ್ರ ನೋಡಲು ಸಾಧ್ಯ. ತಂದೆ-ತಾಯಿ ಗುರುಗಳನ್ನು ಗೌರವಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.