ಮಾತೃಭಾಷೆ ಮರತೆರೆ ತಾಯಿ ಮರೆತಂತೆ: ಪರಮೇಶ್ವರ್

ಕೊರಟಗೆರೆ, ನ. ೪- ಕನ್ನಡಿಗರು ಅತ್ಯಂತ ಸಹೃದಯಿಗಳು, ತುಂಬಾ ತೃಪ್ತಿಯವರು. ಎಲ್ಲರನ್ನು, ಎಲ್ಲವನ್ನೂ ಒಪ್ಪುತ್ತೇವೆ. ಆದರೆ ನಮ್ಮನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎನ್ನುವುದನ್ನು ಎಲ್ಲರಿಗೂ ಕನ್ನಡಿಗರು ತೋರಿಸುತ್ತಿದ್ದು, ಇದರ ಪ್ರತೀಕವಾಗಿ ನಮ್ಮ ರಾಜ್ಯೋತ್ಸವ ನಡೆಯುತ್ತಿದೆ ಎಂದು ಶಾಸಕ ಡಾ. ಜಿ ಪರಮೇಶ್ವರ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಭಾಷೆಯಾಗಿ, ಜ್ಞಾನಾರ್ಜನೆಗಾಗಿ ನಾವು ಯಾವ ಭಾಷೆಯನ್ನು ಅಲ್ಲಗಳಿಯುವಂತಿಲ್ಲ. ಆದರೆ ನಮ್ಮ ಮಾತೃಭಾಷೆಯಾಗಿ ನಾವು ಕನ್ನಡವನ್ನು ಮರೆಯುವಂತಿಲ್ಲ. ಇದನ್ನು ನಾವು ಮರೆತರೆ ನಮ್ಮ ತಾಯಿಯನ್ನು ನಾವು ಮರೆತಂತೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿರುವಂತಹ ಶೇ. ೬೦ ಜನರಿಗೆ ಕನ್ನಡ ಬರುವುದಿಲ್ಲ. ಇವರು ನಮ್ಮ ರಾಜ್ಯಕ್ಕೆ ಬಂದು ೩ ತಲೆಮಾರುಗಳು ಸಂದರೂ ಇನ್ನೂ ಕನ್ನಡಿಗರಾಗಿಲ್ಲ. ಆದರೆ ನಾವುಗಳು ಅವರೆಲ್ಲರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶವನ್ನು ಕಲ್ಪಿಸಿದ್ದೇವೆ. ಅವರೂ ಸಹ ನಮ್ಮ ರಾಜ್ಯದಲ್ಲಿದ್ದು ನಮ್ಮ ಭಾಷೆಯನ್ನು ಕಲಿಯುವಂತಹ ಪ್ರಯತ್ನ ಮಾಡಬೇಕು, ನಮ್ಮವರಾಗಿ ಬದಕಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ೧೯ ಜನ ಸಾಧಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಂ. ಗೋವಿಂದರಾಜು, ಕಸಾಪ ಅಧ್ಯಕ್ಷ ಹುಲಿಕುಂಟೆ ಮಲ್ಲಿಕಾರ್ಜುನ್, ಜಿ.ಪಂ. ಸದಸ್ಯೆ ಪ್ರೇಮಾ, ತಾ.ಪಂ. ಅಧ್ಯಕ್ಷ ಟಿ.ಸಿ ರಾಮಯ್ಯ, ಉಪಾಧ್ಯಕ್ಷ ಬಿ.ಹೆಚ್. ವೆಂಕಟಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಡ್ಲಹಳ್ಳಿ ಅಶ್ವತ್ಥ್‌ನಾರಾಯಣ, ಅರಕೆರೆ ಸೋಮಶೇಖರ್, ಬಿಇಒ ಎನ್.ಎಸ್ ಸುಧಾಕರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಘು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.