ಮಾತೃಭಾಷೆಯಲ್ಲಿನ ಶಿಕ್ಷಣ ಆತ್ಮಬಲ ಹೆಚ್ಚಿಸುತ್ತದೆ : ಶಂಕರಲಿಂಗ ಶಿವಾಚಾರ್ಯ

ಔರಾದ : ನ.21:ಮಾತೃಭಾಷೆಯಲ್ಲಿ ಪಡೆಯುವ ಶಿಕ್ಷಣ ಮಕ್ಕಳಲ್ಲಿ ಆತ್ಮಬಲ ಹೆಚ್ಚಿಸುವಂತಹ ಕೆಲಸ ಮಾಡುತ್ತದೆ ಎಂದು ಶ್ರೀ ದತ್ತಸಾಯಿ ಶನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜ್ಯ ಷ.ಬೃ 108 ಶಂಕರಲಿಂಗ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಪಟ್ಟಣದ ನವಚೇತನ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಹಿನ್ನೆಲೆ ಸಂಭ್ರಮ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಆಯೋಜಿಸಿದ ಕನ್ನಡವೇ ಸತ್ಯ ಕನ್ನಡವೇ ನಿತ್ಯ – ಕನ್ನಡ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾತೃಭಾಷೆಯು ಮಕ್ಕಳನ್ನು ಪೂರ್ಣತೆಯಡೆಗೆ ಕೊಂಡೊಯ್ಯುವ ಕೆಲಸ ಮಾಡುತ್ತದೆ. ಮಕ್ಕಳೇ ದೇಶದ ಅತ್ಯಮೂಲ್ಯ ಸಂಪತ್ತಾಗಿರುವ ಕಾರಣ ಉತ್ತಮ ಸಂಸ್ಕಾರ ಮತ್ತು ಕನ್ನಡ ನಾಡಿನ ಸಾಹಿತ್ಯ ಸಂಸ್ಕೃತಿ ಅರಿತು ಬದುಕು ರೂಪಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ಶಿಕ್ಷಕ ಬಿ.ಆರ್ ಬಿರಾದಾರ್ ಮಾತನಾಡಿ, ಆಂಗ್ಲ ವ್ಯಾಮೋಹದಿಂದ ಹೊರಬಂದು ನಮ್ಮ ನಾಡಿನ ಐತಿಹಾಸಿಕ ಚರಿತ್ರೆಯನ್ನು ಅರಿಯಬೇಕು. ಸುದೀರ್ಘ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಯು ಪ್ರತಿಯೊಬ್ಬ ಕನ್ನಡಿಗನ ಮನೆಯ ಮಾತಾಗಬೇಕು, ಬದುಕಿನ ಭಾಗವಾಗಬೇಕು. ಅಂದಾಗ ಮಾತ್ರ ನಮ್ಮ ನಾಡು ನುಡಿ ಶ್ರೀಮಂತವಾಗಿರುತ್ತದೆ ಎಂದರು.

ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿಎಂ ಅಮರವಾಡಿ ಪ್ರಾಸ್ತಾವಿಕ ಮಾತನಾಡಿ, ಬೀದರ್ ಜಿಲ್ಲೆಯ ವೈಶಿಷ್ಟ್ಯತೆ ಮತ್ತು ಸೌಹಾರ್ದತೆ ಕುರಿತು ತಿಳಿಸಿದರು. ವಿವಿಧ ತರಗತಿಯ ಶಾಲಾ ಮಕ್ಕಳು, ಕಲಾವಿದರಿಂದ ಗೀತಗಾಯನ ಕಾರ್ಯಕ್ರಮ ನೆರವೇರಿತು. ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರಗಳು ನೀಡಿ ಪೆÇ್ರೀತ್ಸಾಹಿಸಲಾಯಿತು.

ಹಿರಿಯರಾದ ಗುಂಡಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಜೀವ ಶಟಕಾರ್, ಸಂಜೀವಕುಮಾರ ಕಂಠಾಳೆ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಗಜಾನನ ಮಳ್ಳಾ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲೂಕು ಅಧ್ಯಕ್ಷ ಸಂಗಮೇಶ ಬೆಲ್ದಾಳ್, ರಘುನಾಥ ರೆಡ್ಡಿ, ಗೋವಿಂದ ರೆಡ್ಡಿ, ಜಗದೇವಿ, ಮಚ್ಚಿಂದ್ರ ಸೇರಿದಂತೆ ಇನ್ನಿತರರಿದ್ದರು.